ಮಂಗಳೂರು: ಉಜಿರೆಯ ಎಂಟು ವರ್ಷದ ಬಾಲಕನ ಅಪಹರಣದಲ್ಲಿ ಟ್ವೀಟ್ ಸಿಕ್ಕಿದೆ. ಬಾಲಕನನ್ನು ಕಿಡ್ನಾಪ್ ಮಾಡಲು ವ್ಯಕ್ತಿಯೊಬ್ಬ 7 ಲಕ್ಷ ರೂ. ಸುಪಾರಿ ನೀಡಿದ್ದ ಎನ್ನುವ ವಿಚಾರ ಬಯಲಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಅನುಭವ್ ಅಪಹರಣ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಸುಪಾರಿ ನೀಡಿದ ಆರೋಪಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮಂಡ್ಯದ ರಂಜಿತ್ (22), ಹನುಮಂತ್ (21), ಮೈಸೂರಿನ ಗಂಗಾಧರ (25) ಮತ್ತು ಬೆಂಗಳೂರಿನ ಕಮಲ್ (22) ಪ್ರಮುಖ ಆರೋಪಿಗಳು. ಮಂಜುನಾಥ ಎಂಬಾತನ (24)ನ ನೆರವಿನಿಂದ ಕೋಲಾರದ ಮಹೇಶ್ (26) ಮನೆಯಲ್ಲಿ ಮಗುವನ್ನು ಇಟ್ಟಿದ್ದರು ಎಂದರು.
ಬಂಧಿತ ಆರೋಪಿಗಳಲ್ಲಿ ನಾಲ್ಕು ಜನರಿಗೆ ವ್ಯಕ್ತಿಯೊಬ್ಬ ಏಳು ಲಕ್ಷ ಕೊಡುವುದಾಗಿ ಸುಪಾರಿ ಕೊಟ್ಟಿದ್ದರು. ಆತ ಬಾಲಕನ ಕುಟುಂಬದ ಪರಿಚಯಸ್ಥ ಎಂಬ ಬಗ್ಗೆ ಮಾಹಿತಿಯಿದೆ. ಆತನ ಮಾಹಿತಿ ಲಭ್ಯವಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಸುಪಾರಿ ನೀಡಿದ ವ್ಯಕ್ತಿ ಸಿಕ್ಕ ಬಳಿಕ ಅಪಹರಣದ ಸ್ಪಷ್ಟ ಉದ್ದೇಶ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದರು.
Kshetra Samachara
19/12/2020 08:15 pm