ಮುಲ್ಕಿ: ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಚರಂತಿಪೇಟೆ ಮಿಲ್ಲಿನ ಅಂಗಡಿ ಎದುರು ಬದಿಯ ಜುವೆಲ್ಲರಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ವಿಶೇಷವೆಂದರೆ ಈ ಅಂಗಡಿಗೆ 2ನೇ ಬಾರಿ ಕಳ್ಳರು ಲಗ್ಗೆ ಹಾಕಿದ್ದಾರೆ. ಚರಂತಿಪೇಟೆ ಬಳಿಯ ಪ್ರಕಾಶ್ ಜ್ಯುವೆಲ್ಲರ್ಸ್ ಗೆ ನುಗ್ಗಿದ ಕಳ್ಳರು ಶಟರಿನ ಎರಡು ಬೀಗ ಮುರಿದು ಹಿಂಭಾಗದ ತೋಟದಲ್ಲಿ ಬೀಸಾಡಿದ್ದಾರೆ. ಅಂಗಡಿ ಒಳಗಿನ ಡ್ರಾವರನ್ನು ಭಾರವಾದ ಸಾಧನದಿಂದ ನಜ್ಜುಗುಜ್ಜು ಮಾಡಿ ಜಾಲಾಡಿ ಕಳವು ನಡೆಸಿದ್ದಾರೆ.
ಈ ಮೊದಲು ಅಕ್ಟೋಬರ್ ನಲ್ಲಿ ಕಳ್ಳರು ಈ ಜ್ಯುವೆಲ್ಲರಿ ಹಿಂಭಾಗದಿಂದ ಎಕ್ಸಾಸ್ಟ್ ಫ್ಯಾನ್ ತುಂಡರಿಸಿ ಗೋಡೆ ಮೂಲಕ ಒಳಗೆ ಬಂದು ಸುಮಾರು 80,000 ರೂ. ಮೌಲ್ಯದ ಚಿನ್ನ, ಬೆಳ್ಳಿಯ ಸಾಮಗ್ರಿ ಕಳ್ಳತನ ಮಾಡಿದ್ದರು. ಕಳ್ಳತನ ನಡೆದ ಬಳಿಕ ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೂ ಕಳ್ಳರ ಪತ್ತೆಯಾಗಿಲ್ಲ. ಕಳ್ಳತನ ನಡೆದ ಬಳಿಕ ಪೊಲೀಸರು ಮಿಲ್ಲಿನ ಅಂಗಡಿ ಬಳಿಯ ಪರಿಸರದಲ್ಲಿ ಬೀಟ್ ನಡೆಸಿದ ಬಗ್ಗೆ ಪರಿಶೀಲನೆಗೆ ನೋಟಿಸ್ ಅಂಟಿಸಿದ್ದು, ಇದುವರೆಗೂ ಯಾವ ಬೀಟ್ ಪೊಲೀಸರು ಸಹಿ ಹಾಕಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಮುಲ್ಕಿಯಲ್ಲಿ ಬೆಳಿಗ್ಗೆ ಪತ್ತೆಯಾದ ಎರಡು ಕಡೆ ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಚರಂತಿಪೇಟೆ ಆಸುಪಾಸಿನಲ್ಲಿ ಕೆಲ ಅನಾಮಧೇಯ ವ್ಯಕ್ತಿಗಳು ಶಂಕಿತ ರೀತಿ
ನಡೆದಾಡುತ್ತಿದ್ದು, ಪೊಲೀಸರು ಇತ್ತ ಗಮನ ಹರಿಸಿ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
03/12/2020 01:21 pm