ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೆಲ್ಕಾರ್, ನರಹರಿ, ಬೋಳಿಯಾರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವ್ಯಾಹತವಾಗಿ ಅಕ್ರಮ ಕಲ್ಲು ಸಾಗಾಟ ನಡೆಯುತ್ತಿದ್ದು ತಕ್ಷಣವೇ ಅದನ್ನ ರದ್ದುಗೊಳಿಸುವಂತೆ ಸ್ಟೋನ್ಸ್ ಬಿಲ್ಡರ್ಸ್ ಸಪ್ಲೈಯರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಹೇಮಂತ್ ಕುಮಾರ್ ಒತ್ತಾಯಿಸಿದ್ದಾರೆ. ತುಳುನಾಡ ರಕ್ಷಣಾ ವೇದಿಕೆ ಹಾಗೂ ಸ್ಟೋನ್ ಬಿಲ್ಡರ್ಸ್ ಸಪ್ಲೈಯರ್ಸ್ ಅಸೋಸಿಯೇಶನ್ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಅಕ್ರಮವಾಗಿ ಗಣಿಗಾರಿಕೆ ನಡೆದು ಕೇರಳಕ್ಕೆ ಕಲ್ಲು ಸಾಗಾಟವಾಗುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ.
ಇದರರ್ಥ ಅಧಿಕಾರಿಗಳು ಕೂಡಾ ಇದರಲ್ಲಿ ಶಾಮೀಲು ಎನ್ನುವುದು ಸ್ಪಷ್ಟ. ಕೇರಳದಲ್ಲಿ ಕಲ್ಲು ಗಣಿಗಾರಿಕೆ ನಿಷೇಧವಿದ್ದು ಪರಿಣಾಮ ಗಡಿಯಲ್ಲಿರುವ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಹಲವೆಡೆ ಗಣಿಗಾರಿಕೆ ನಡೆಸಿ ಕೇರಳಕ್ಕೆ ಕೊಂಡೊಯ್ಯಲಾಗುತ್ತಿದೆ. ಸಾಮಾನ್ಯ ವ್ಯಕ್ತಿಯೊಬ್ಬ ಜಿಲೆಟಿನ್ ಸಹಿತ ಇನ್ನಿತರ ಸ್ಫೋಟಕ ಕೊಂಡೊಯ್ದರೆ ಆತನನ್ನ ಉಗ್ರಗಾಮಿ ನೆಲೆಗಟ್ಟಿನಲ್ಲಿ ತನಿಖೆ ನಡೆಯುತ್ತೆ. ಆದರೆ ಈ ಭಾಗಗಳಲ್ಲಿ ವ್ಯಾಪಕ ಸ್ಫೋಟಕ ಬಳಸಿ, ಪರಿಸರ ನಾಶಗೊಳಿಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಯಾಕಾಗಿ ಮೌನ ಎಂದು ಪ್ರಶ್ನಿಸಿದರು.
Kshetra Samachara
02/12/2020 06:59 pm