ಉಡುಪಿ: ಕಾರವಾರದ ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20ಕ್ಕೂ ಹೆಚ್ಚು ಯುವಕರಿಗೆ ವಂಚಿಸಿದ ಪ್ರಮುಖ ಆರೋಪಿ ರಿತೇಶ್ ಪಟ್ವಾಲ್ ಎಂಬಾತನನ್ನು ಬಂಧಿಸಲಾಗಿದೆ.
ಕೆಲ ದಿನಗಳ ಹಿಂದೆ ರಿತೇಶ್ ಒಂದಿಷ್ಟು ಯುವಕರನ್ನು ಸಂಪರ್ಕಿಸಿ ಕೈಗಾದಲ್ಲಿ ಉತ್ತಮ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ. ತಾನು ಕೂಡ ಅಲ್ಲೇ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತನ್ನ ಗುರುತಿನ ಚೀಟಿ ತೋರಿಸಿ ನಂಬಿಸಿದ್ದಲ್ಲದೆ, ಆಗಾಗ್ಗೆ ಕಾರವಾರಕ್ಕೆ ಹೋಗಿ ಬರುವ ನಾಟಕವಾಡುತ್ತಿದ್ದ. ಸಂಸ್ಥೆಯಲ್ಲಿ ಕಂಪ್ಯೂಟರ್ ಆಧಾರಿತ ಹುದ್ದೆ ಖಾಲಿ ಇರುವುದಾಗಿ ಹೇಳಿಕೊಂಡು, ಉದ್ಯೋಗ ಆಕಾಂಕ್ಷಿಗಳಿಂದ ರೆಸ್ಯೂಮ್ ಪಡೆದು, ನಕಲಿ ನೇಮಕ ಪತ್ರ ತಯಾರಿಸಿ ಉದ್ಯೋಗಾಕಾಂಕ್ಷಿಗಳಿಂದ ತಲಾ 20,000ಕ್ಕೂ ಹೆಚ್ಚು ಹಣ ಪಡೆದಿದ್ದಲ್ಲದೆ ಅವರೆಲ್ಲರನ್ನೂ ಕೈಗಾಕ್ಕೆ ತೆರಳುವಂತೆಯೂ ಸೂಚಿಸಿದ್ದ. ಆದರೆ, ಕೈಗಾದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಒಳಕ್ಕೆ ಬಿಡದೆ, ಅವರ ದಾಖಲೆ ಪರಿಶೀಲಿಸಿದ ಬಳಿಕ ತಾವು ನಕಲಿ ದಾಖಲೆಯಿಂದ ಮೋಸ ಹೋಗಿರುವುದು ತಿಳಿದುಬಂದಿದೆ.
ಅಷ್ಟರಲ್ಲೇ ಹಣ ಪೀಕಿಸಿದ್ದ ವಂಚಕ ರಿತೀಶ್ ಪರಾರಿಯಾಗಿದ್ದ. ಈ ಬಗ್ಗೆ ವಂಚನೆಗೊಳಗಾದ ಯಳಜಿತ ಸತೀಶ್ ದೂರು ನೀಡಿದ್ದು, ಅದರಂತೆ ಬೈಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ರಿತೇಶ್ ಉದ್ಯೋಗ ಕೊಡಿಸುವುದಾಗಿ 50ಕ್ಕೂ ಹೆಚ್ಚು ಯುವಕ-ಯುವತಿಯರಿಂದ 20 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಬೈಂದೂರು ತಾಲೂಕು ಭಾಗದ ಯುವಕ- ಯುವತಿಯರು ಉದ್ಯೋಗದ ಆಸೆಗೆ ಈತನಿಗೆ ಹಣ ನೀಡಿ ಮೋಸ ಹೋಗಿದ್ದಾರೆ. ಉದ್ಯೋಗ ಕೊಡಿಸುವುದಾಗಿ ವಂಚಿಸಿ ಕಾಲ್ಕಿತ್ತಿದ್ದ ರಿತೇಶನ್ನು ಶೃಂಗೇರಿಯಲ್ಲಿ ಬಂಧಿಸಿ ಕರೆತರಲಾಗಿದೆ.
ಈತನ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಶೃಂಗೇರಿಯಲ್ಲಿ ಈತನ ಚಲನವಲನ ಗುರುತಿಸಿದ ಸ್ಥಳೀಯರು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಬೈಂದೂರು ಪೊಲೀಸರು ಬಂಧಿಸಿ ಕರೆತಂದು ವಿಚಾರಣೆ ನಡೆಸುತ್ತಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
Kshetra Samachara
21/11/2020 03:24 pm