ಉಳ್ಳಾಲ: ಗಸ್ತಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಹೆಡ್ ಕಾನ್ಸ್ ಟೇಬಲ್ ಗೆ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು,ಗಂಭೀರ ಸ್ಥಿತಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಆಸ್ಪತ್ರೆ ಸೇರಿದ ಘಟನೆ ಉಳ್ಳಾಲ ಬೈಲಿನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಹೆಡ್ ಕಾನ್ಸ್ ಟೇಬಲ್ ಲೋಕೇಶ್ ನಾಯ್ಕ್ ಸ್ಥಿತಿ ಗಂಭೀರವಾಗಿದ್ದು ಅವರನ್ನ ನಗರದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲೋಕೇಶ್ ನಾಯ್ಕ್ ಮತ್ತು ಎಎಸ್ಐ ಮಂಜುಳ ಅವರು ಹೈವೇ ಪೆಟ್ರೋಲ್ ವಾಹನದಲ್ಲಿ ಇಂದು ಸಂಜೆ ಉಳ್ಳಾಲ ಬೈಲಲ್ಲಿ ಗಸ್ತಲ್ಲಿದ್ದ ವೇಳೆ ಘಟನೆ ನಡೆದಿದೆ.ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಧಾವಿಸುತ್ತಿದ್ದ ಸ್ವಿಪ್ಟ್ ಕಾರನ್ನ ಲೋಕೇಶ್ ಅವರು ತಪಾಸಣೆಗಾಗಿ ತಡೆದು ಬದಿಗೆ ನಿಲ್ಲುವಂತೆ ಸೂಚಿಸಿದ್ದರಂತೆ.ಬದಿಗೆ ಬಂದ ಕಾರು ಏಕಾ ಏಕಿ ಲೋಕೇಶ್ಗೆ ಬಲವಾಗಿ ಢಿಕ್ಕಿ ಹೊಡೆದು ಉಳ್ಳಾಲದ ಕಡೆಗೆ ಪರಾರಿಯಾಗಿದೆ.
ಕಾರು ಢಿಕ್ಕಿ ಹೊಡೆದ ರಭಸಕ್ಕೆ ಲೋಕೇಶ್ ಅವರು ರಸ್ತೆಯ ವಿಭಜಕಕ್ಕೆ ಎಸೆಯಲ್ಪಟ್ಟಿದ್ದಾರೆ. ತಲೆ ಭಾಗಕ್ಕೆ ಡಿವೈಡರ್ ಬಡಿದು ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನ ನಗರದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿ ಹೊಡೆದು ಪರಾರಿಯಾದ ಸ್ವಿಪ್ಟ್ ಕಾರಿನ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು,ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು ಸಮೀಪದ ಸಿಸಿಟಿವಿಗಳನ್ನ ತಪಾಸಣೆ ನಡೆಸುತ್ತಿದ್ದಾರೆ.ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
03/10/2022 02:52 pm