ಕಡಬ: ಕಡಬ ಮುಖ್ಯ ಪೇಟೆಯಲ್ಲಿ ಬಸ್ ಹತ್ತುವಾಗ ಕಳ್ಳನೋರ್ವ ಯುವತಿಯ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.
ಅ. 22ರಂದು ಮಧ್ಯಾಹ್ನ 12.45ರ ಸುಮಾರಿಗೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿಯತ್ತ ಹೋಗುವ ಸರಕಾರಿ ಬಸ್ ಗೆ ಕಡಬ ಪೇಟೆಯ ಪಂಜ ಕ್ರಾಸ್ ಬಳಿಯಿರುವ ಟಿ.ಸಿ. ಪಾಯಿಂಟ್ ಹತ್ತಿರದಿಂದ ಯುವತಿ ಬಸ್ ಹತ್ತಿದ್ದಾರೆ.
ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ ಯುವತಿಯ ಬ್ಯಾಗ್ ನಿಂದ ಬೆಲೆಬಾಳುವ ಮೊಬೈಲ್ ನ್ನು ಚಾಲಾಕಿ ಖದೀಮ ಎಗರಿಸಿದ್ದಾನೆ.
ಯುವತಿಯ ಹಿಂದಿನಿಂದ ಬಸ್ ಏರಿದ ಕಳ್ಳ ಮೊಬೈಲ್ ಎಗರಿಸಿ ಕೂಡಲೇ ಬಸ್ ನಿಂದ ಇಳಿದು ಹೋಗುವ ದೃಶ್ಯ ಹತ್ತಿರದ ಅಂಗಡಿಯಲ್ಲಿನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಕ್ಷಣವೇ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಡಬ ಪೇಟೆಯಾದ್ಯಂತ ಪೊಲೀಸರು ಹುಡುಕಾಟ ನಡೆಸಿದರೂ ಕಳ್ಳನ ಪತ್ತೆ ಆಗಿಲ್ಲ. ಕಡಬ ಪೇಟೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಅತ್ಯಾಧುನಿಕ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಈ ಕ್ಯಾಮೆರಾಗಳು ಅಕ್ರಮ ಪತ್ತೆ ಹಚ್ಚಲು ಯೋಗ್ಯವಲ್ಲದ ರೀತಿಯಲ್ಲಿ ಇದೆ.
ಇದನ್ನು ಸರಿಪಡಿಸಲು ಸಂಬಂಧಿಸಿದ ಇಲಾಖೆಗಳು ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಮೊಬೈಲ್ ಕಳ್ಳನ ಗುರುತು ಯಾರಿಗಾದರೂ ಲಭ್ಯವಾದರೆ ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ವಾಟ್ಸ್ ಆ್ಯಪ್ ಸಂದೇಶ ನೀಡಲಾಗಿದೆ.
Kshetra Samachara
23/10/2020 01:04 pm