ಮಂಗಳೂರು: ಕಾಂತಾರ ಸಿನಿಮಾವನ್ನು ನಿರ್ಮಿಸುವ ಮೊದಲೇ ಅದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಆದರೆ ಮೊದಲಾಗಿ ಕನ್ನಡದಲ್ಲೇ ಮಾಡಬೇಕೆಂಬ ಒತ್ತಾಸೆಯಿಂದ ಈ ಸಿನಿಮಾವನ್ನು ಕನ್ನಡದಲ್ಲಿ ಮಾತ್ರ ನಿರ್ಮಾಣ ಮಾಡಲಾಗಿದೆ. ಇದೀಗ ಈ ಸಿನಿಮಾಕ್ಕೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸಂತೋಷದ ವಿಚಾರ ಎಂದು ಕಾಂತಾರ ಸಿನಿಮಾ ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದರು.
ಮಂಗಳೂರಿನಲ್ಲಿಂದು ತಮ್ಮ ಚಿತ್ರತಂಡದೊಂದಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೀಗ ಸಿನಿಮಾದ ಬಗ್ಗೆ ಎಲ್ಲೆಡೆ ಜನರು ಮಾತನಾಡತೊಡಗಿದ್ದು, ಬೇರೆ ಭಾಷೆಗಳಿಗೂ ಡಬ್ ಮಾಡಬೇಕೆಂಬ ಒತ್ತಾಯ ಕೇಳೊ ಬರುತ್ತಿದೆ. ಎರಡು ದಿನಗಳಲ್ಲಿ ಕಾಂತಾರ ಸಿನಿಮಾವನ್ನು ಇತರ ಭಾಷೆಗಳಿಗೂ ಡಬ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳು ಹೌಸ್ ಫುಲ್ ಆಗಿ ಪ್ರದರ್ಶನ ಆಗೋದು, ಸಿನಿಮಾ ಟಿಕೆಟ್ ಸೋಲ್ಡ್ ಔಟ್ ಆಗೋದು ಕನಸಿನ ಮಾತು. ಆದರೆ ಕಾಂತಾರ ಸಿನಿಮಾ ಹೌಸ್ ಫುಲ್ ಆಗಿ ಪ್ರದರ್ಶನಗೊಂಡು ಜನರು ಟಿಕೆಟ್ ಗಾಗಿ ಕಾಯುವ ಸ್ಥಿತಿ ನಿರ್ಮಾಣ ಆಗಿರೋದು ಸಂತೋಷದ ವಿಚಾರ. ಕಾಂತಾರ ಸಿನಿಮಾ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕಥೆ. ದೈವಾರಾಧನೆಯ ಹಿನ್ನೆಲೆಯುಳ್ಳ ಈ ಸಿನಿಮಾವನ್ನು ನಾವು ಅತ್ಯಂತ ಶ್ರದ್ಧೆ ಭಕ್ತಿಯಿಂದ ಮಾಡಿದ್ದೇವೆ. ಒಟ್ಟಿನಲ್ಲಿ ನಾವು ಈ ಸಿನಿಮಾ ಮಾಡಿದ್ದೇವೆ ಅನ್ನುವುದಕ್ಕಿಂತ, ಆ ದೈವವೇ ನಮ್ಮಿಂದ ಈ ಸಿನಿಮಾ ಮಾಡಿಸಿದೆ ಎನ್ನುವುದೇ ಸೂಕ್ತ ಎಂದು ಹೇಳಿದರು.
ಸಿನಿಮಾದಲ್ಲಿ ನನ್ನ ಪಾತ್ರ ದೈವಾವೇಶದಲ್ಲಿ ಬೊಬ್ಬೆಯಿಡುವ ಒಂದು ದೃಶ್ಯವಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅದರ ಅನುಕರಣೆ ಮಾಡಲಾಗುತ್ತಿದೆ. ದೈವಾರಾಧನೆ ಒಂದು ಆಚಾರಣೆಯ ಭಾಗ, ನಂಬಿಕೆಯ ಸಂಗತಿಯಾಗಿದೆ. ದೈವಾರಾಧನೆಯ ಆಳ, ಅಗಲ ಎಷ್ಟು, ಏನು ಎಂದು ತಿಳಿದು ಎಲ್ಲರೂ ವ್ಯವಹಾರ ಮಾಡಬೇಕು ಎಂದು ಹೇಳಿದ ರಿಷಭ್ ಶೆಟ್ಟಿಯವರು ದಯವಿಟ್ಟು ಯಾರೂ ದೈವದಂತೆ ಕೂಗು ಹಾಕೋದನ್ನು ಯಾರೂ ಅನುಕರಣೆ ಮಾಡಬಾರದೆಂದು ಮನವಿ ಮಾಡಿದರು.
PublicNext
04/10/2022 05:12 pm