ಪುತ್ತೂರು: ತೋಟದಲ್ಲಿ ಎಲ್ಲೆಂದರಲ್ಲಿ ನಾರುತ್ತಿದ್ದ ಹಲಸಿಗೆ ಇದೀಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹಲಸಿನಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹಲಸಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರು ಹಲಸಿನ ಮೇಳಗಳನ್ನು ಆಯೋಜಿಸುವ ಮೂಲಕ ಹಲಸಿನ ವಿವಿಧ ಉತ್ಪನ್ನಗಳನ್ನು ಜನತೆಗೆ ಮುಟ್ಟಿಸುವ ಕಾರ್ಯ ನಡೆಯುತ್ತಿದೆ. ಇಂಥಹುದೇ ಒಂದು ಹಲಸು ಮೇಳ ಸದ್ಯ ಪುತ್ತೂರಿನಲ್ಲಿ ನಡೆಯುತ್ತಿದೆ. ಈ ಮೇಳಕ್ಕೆ ಭಾರೀ ಜನ ಬೆಂಬಲವೂ ವ್ಯಕ್ತವಾಗಿದೆ.
ಪ್ರತೀ ವರ್ಷವೂ ಈ ಹಲಸಿನ ಮೇಳವನ್ನು ಪುತ್ತೂರಿನಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿತ್ತಾದರೂ, ಕೋವಿಡ್‌ನಿಂದಾಗಿ ಹಾಲಸು ಮೇಳದ ಆಯೋಜನೆಗೆ ಸಮಸ್ಯೆಗಳು ಎದುರಾಗಿದ್ದವು. ಆದರೆ ಈ ಬಾರಿ ಮತ್ತೆ ಹಲಸಿನ ಮೇಳವನ್ನು ವಿಶೇಷವಾಗಿ ಹಮ್ಮಿಕೊಳ್ಳುವ ಮೂಲಕ ಜನರನ್ನು ಹಲಸಿನ ಇನ್ನಷ್ಟು ಹತ್ತಿರ ಕರೆತರುವ ಪ್ರಯತ್ನವನ್ನು ನಡೆಸಲಾಗಿದೆ.
ಹಲಸಿನ ಕುರಿತ ಮಾಹಿತಿ, ಹಲಸಿನ ವಿವಿಧ ರೀತಿಯ ತಳಿಗಳ ಪ್ರದರ್ಶನ ಮತ್ತು ಮಾರಾಟ, ಹಲಸಿನ ಹಪ್ಪಳ, ಸೆಂಡಿಗೆ, ಹೋಳಿಗೆ, ಹಲಸಿನ ದೋಸೆ, ಹಲಸಿನ ಪಾನಿಪೂರಿ, ಹಲಸಿನ ಮಂಚೂರಿ, ಹಲಸಿನ ಕೇಕ್, ಹಲಸಿನ ಸೀರಾ, ಹಲಸಿನ ಪೇಡಾ ಹೀಗೆ ಹಲಸಿನ್ನೇ ಬಳಸಿದ ಬಹುತೇಕ ತಿಂಡಿ-ತಿನಿಸುಗಳನ್ನು ಈ ಮೇಳದಲ್ಲಿ ಪರಿಚಯಿಸಲಾಗಿದೆ. ಹಲಸಿನಿಂದ ವ್ಯಾಲ್ಯೂ ಆಡೆಡ್ ಉತ್ಪನ್ನಗಳನ್ನು ಹೇಗೆ ತಯಾರಿಸಬಹುದು ಎನ್ನುವ ಕುರಿತು ತಜ್ಞರಿಂದ ಮಾಹಿತಿ ಒದಗಿಸುವ ಪ್ರಯತ್ನವೂ ಈ ಮೇಳದಲ್ಲಿ ನಡೆದಿದ್ದು, ಈ ಮೇಳಕ್ಕೆ ಈ ಬಾರಿ ಜನತೆಯಿಂದ ಉತ್ತಮ ಪ್ರತಿಕ್ರಿಯೆಯೂ ದೊರೆತಿದೆ.
Kshetra Samachara
26/06/2022 04:15 pm