ಉಡುಪಿ: ಹಣ್ಣುಗಳ ರಾಜನೆಂದೇ ಪ್ರಖ್ಯಾತವಾದ ವಿವಿಧ ಬಗೆಯ ಮಾವಿನ ಹಣ್ಣಿನ ಮೇಳವನ್ನು ಉಡುಪಿಯ ದೊಡ್ಡಣಗುಡ್ಡೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಗ್ರಾಹಕರಿಗೆ ನೇರವಾಗಿ ರೈತರಿಂದಲೇ ನೈಸರ್ಗಿಕ ತಾಜಾ ಹಾಗೂ ಸ್ವಾದಿಷ್ಟ ಮಾವಿನ ಹಣ್ಣು ಒದಗಿಸುವುದು, ಸಾರ್ವಜನಿಕರಿಗೆ ವಿವಿಧ ಮಾವಿನ ತಳಿಗಳನ್ನು ಪರಿಚಯಿಸುವುದು, ಹವಾಮಾನ ವೈಪರೀತ್ಯದಿಂದಾಗಿ ಮಾವು ಇಳುವರಿ ನಷ್ಟದಲ್ಲಿರುವ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವುದು ಮೇಳದ ಉದ್ದೇಶ.
ಜಿಲ್ಲಾಡಳಿತ, ಜಿ. ಪಂ ಹಾಗೂ ತೋಟಗಾರಿಕೆ ಇಲಾಖೆಯಿಂದ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ಆಶ್ರಯದಲ್ಲಿ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 21ರಿಂದ 23ರವರೆಗೆ ಆಯೋಜಿಸಿದೆ.ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಯನ್ನು ತೆರೆಯಲಾಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್‌ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್‌ಸ್ ಸಹಿತ ನಾನಾ ತಳಿಯ ಒಟ್ಟು 30 ಟನ್ ಮಾವು ಮೇಳದಲ್ಲಿ ಲಭ್ಯವಿದೆ.
ಮಾವು ಮೇಳದಲ್ಲಿ ಸಕ್ಕರೆಗುತ್ತಿ ಮಾವು ವಿಶೇಷ ಆಕರ್ಷಣೆಯಾಗಿದ್ದು, ಕೆಜಿಗೆ 200 ದರವಿದೆ., ತಿನ್ನಲು ರುಚಿಕರವಾಗಿದ್ದು, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ.ಮೊದಲ ಭಾರಿಗೆ ನಡೆದ ಮಾವು ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮಾವು ಬೆಳೆ ಪ್ರಮಾಣ ತೀರ ಕಡಿಮೆ ಇದ್ದರೂ, ಮೇಳದ ಮೊದಲ ದಿನವೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಮೇಳದಲ್ಲಿ ಭಾಗವಹಿಸಿ ವಿವಿಧ ಹಣ್ಣುಗಳ ರುಚಿ ಸವಿದು, ಖರೀದಿ ಮಾಡಿದರು.ಮಾವು ಮೇಳವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
Kshetra Samachara
21/05/2022 10:19 pm