ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಟನ್ ದರ ಗಗನಕ್ಕೇರಿದೆ. ಕೆಲ ದಿನಗಳ ಹಿಂದಷ್ಟೇ ಪ್ರತಿ ಕೆ.ಜಿ.ಗೆ ಸುಮಾರು 100 ರೂ. ಹೆಚ್ಚಾಗಿದೆ.
ಮಂಗಳೂರಿನಲ್ಲಿ 550 ರೂ. ಇದ್ದ ಮಟನ್ ದರ 600 ರೂ. ಹಾಗೂ ಬನ್ನೂರು ಮಟನ್ ದರ 720 ರೂ.ದಿಂದ 770 ರೂ.ಗೆ ಏರಿಕೆಯಾಗಿದೆ. ಉಡುಪಿಯ ಇಂದಿನ ಮಾರುಕಟ್ಟೆಯ ಪ್ರಕಾರ ಒಂದು ಕೆ.ಜಿ. ಆರ್ಡಿನರಿ ಮಟನ್‌ಗೆ 550ರಿಂದ 600 ರೂ. ಹಾಗೂ ಬನ್ನೂರು ಸ್ಪೆಷಲ್ ಮಟನ್‌ಗೆ 650ರಿಂದ 700 ರೂ. ದರ ಇದೆ.
ಮಹಾರಾಷ್ಟ್ರ, ಚಿತ್ರದುರ್ಗದಿಂದ ಕರಾವಳಿ ಜಿಲ್ಲೆಗಳಿಗೆ ಕುರಿಗಳು ಪೂರೈಕೆಯಾಗುತ್ತವೆ. ಬನ್ನೂರು ಸ್ಪೆಷಲ್ ಕುರಿ ಮಾಂಸ ಬಹು ಬೇಡಿಕೆಯದ್ದಾಗಿದೆ. ಹೊರ ರಾಜ್ಯ, ಜಿಲ್ಲೆಯಿಂದ ಕುರಿಗಳು ಬರಬೇಕಿದ್ದು, ಸಾರಿಗೆ ವೆಚ್ಚ ದುಪ್ಪಟ್ಟಾಗಿರುವುದು, ಜಿಎಸ್‌ಟಿ, ಮಳಿಗೆ ಬಾಡಿಗೆ ಹೆಚ್ಚಳದಿಂದ ದರ ಏರಿಕೆಯಾಗುತ್ತಿದೆ ಎಂಬುದು ಸ್ಥಳೀಯ ವ್ಯಾಪಾರಿಗಳ ಅಭಿಪ್ರಾಯವಾಗಿದೆ.
ಕೋಳಿ ಮಾಂಸ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ಕಾಪಾಡಿಕೊಂಡಿದ್ದು, ಕಳೆದ ಎರಡು- ಮೂರು ತಿಂಗಳಿನಿಂದ ದರದಲ್ಲಿ ಹೆಚ್ಚಿನ ಇಳಿಕೆ ಕಂಡು ಬಂದಿಲ್ಲ. ಉಡುಪಿಯಲ್ಲಿ ಸಜೀವ ಕೋಳಿ ಕೆ.ಜಿ.ಗೆ 130 ರೂ, ಇದ್ದರೆ ಮಾಂಸಕ್ಕೆ 200 ರೂ. ಇದೆ. ಮಂಗಳೂರಿನಲ್ಲಿ ಚಿಕನ್ ದರ ವಿದ್ ಸ್ಕಿನ್ 180, ವಿದೌಟ್ ಸ್ಕಿನ್ 200 ರೂ. ಇದೆ. ಕೋಳಿ ಮಾಂಸದ ದರ 5ರಿಂದ 10 ರೂ.ನಷ್ಟು ಏರಿಕೆಯಾಗಿದೆ.
Kshetra Samachara
26/12/2020 02:48 pm