ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಹವಾಮಾನ ವೈಪರೀತ್ಯ, ಮುಂಗಾರು ಪೂರ್ವ ಮಳೆಯ ಅಬ್ಬರದಿಂದಾಗಿ ಮೀನು ದರ ಗಗನಕ್ಕೇರಿದೆ. ಮೀನುಗಾರಿಕಾ ಬೋಟ್‌ಗಳು ಅವಧಿಗೂ ಮುನ್ನ ಮಲ್ಪೆಯಲ್ಲಿ ಲಂಗರು ಹಾಕಿವೆ. ಇವೆಲ್ಲದರ ಪರಿಣಾಮ ಮೀನಿನ ಬೆಲೆ ದುಬಾರಿಯಾಗಿದ್ದು, ಮತ್ಸ್ಯಪ್ರಿಯರು ದುಬಾರಿ ಹಣ ತೆತ್ತು ಮೀನು ಖರೀದಿ ಮಾಡಬೇಕಿದೆ.
ವರ್ಷಂಪ್ರತಿ ಜೂನ್ ಒಂದಕ್ಕೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಇದೆ. ಈ ಅವಧಿಯಲ್ಲಿ ಮಳೆ ಜೋರು. ಹೀಗಾಗಿ ಎರಡು ತಿಂಗಳು ಮೀನುಗಾರಿಕೆಗೆ ಸರಕಾರವೇ ನಿಷೇಧ ಹೇರಿದೆ. ಆದರೆ ಈ ವರ್ಷ ಮೇ ಮೊದಲ ವಾರದಲ್ಲೇ ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಹವಾಮಾನ ವೈಪರೀತ್ಯದ ಕಾರಣಕ್ಕೆ ಬಂದರಿಗೆ ವಾಪಾಸಾದ ನೂರಾರು ಬೋಟುಗಳು ಮತ್ತೆ ಮೀನುಗಾರಿಕೆಗೆ ಹೋಗಿಲ್ಲ. ಕಾರಣ, ಜೂನ್ ಒಂದರಿಂದ ಎರಡು ತಿಂಗಳು ಮಳೆಗಾಲದ ನಿಷೇಧ ಇದೆ. ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಬಂದರಿನಲ್ಲಿ ಬೋಟ್‌ಗಳು ಲಂಗರು ಹಾಕಿದ್ದು ಮತ್ಸ್ಯ ಪ್ರಿಯರ ಬೇಡಿಕೆ ಈಡೇರಿಸಲಾಗುತ್ತಿಲ್ಲ. ಪರಿಣಾಮವಾಗಿ ಮೀನಿನ ಬೆಲೆ ಗಗನಕ್ಕೇರಿದೆ.
ಕರಾವಳಿಯ ಪ್ರಮುಖ ಮೀನು, ಅಂಜಲ್, ಪಾಂಪ್ರೆಟ್ ಬೆಲೆ ಕೆಜಿಗೆ ಸಾವಿರ ತಲುಪಿದೆ. ಇನ್ನು ಮಳೆಗಾಲದ ಹೊಳೆಮೀನು ಮತ್ತಷ್ಟು ದುಬಾರಿಯಾಗಿದೆ. ಮತ್ಸ್ಯ ಪ್ರಿಯರು ಮಾರುಕಟ್ಟೆಗೆ ಹೋಗಿ ಮೀನಿನ ಬೆಲೆ ಕೇಳಿ ವಾಪಾಸಾಗುತ್ತಿದ್ದಾರೆ. ಮೀನು ಖರೀದಿಸಿದರೂ ಕಿಸೆಗೆ ಕತ್ತರಿ ಗ್ಯಾರಂಟಿ.
ಕರಾವಳಿ ಜನರಿಗೆ ನಿತ್ಯ ಮೀನು ಬೇಕೇಬೇಕು. ಆದರೆ ದುಬಾರಿ ಬೆಲೆಯಿಂದಾಗಿ ಮೀನು ಕೈಗೆಟುಕದೆ ಮತ್ಸ್ಯಪ್ರಿಯರಿಗೆ ನಿರಾಸೆ ಉಂಟಾಗಿದೆ.
PublicNext
25/05/2022 06:16 pm