ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಕರಾವಳಿಯಲ್ಲಿ ಗೋಲಿ ಸೋಡಾ ಅಂದ್ರೆ ಒಂದು ಕಾಲದಲ್ಲಿ ಭಾರೀ ಫೇಮಸ್ಸು. ಹಿಂದಿನ ತಲೆಮಾರಿನ ಎಲ್ಲರಿಗೂ ಈ ಗೋಲಿ ಸೋಡಾ ಅಂದ್ರೆ ಅಚ್ಚುಮೆಚ್ಚು. ಹಸಿರು ಬಾಟಲಿ ಮಧ್ಯದಲ್ಲಿರುವ ಗೋಲಿಯನ್ನು ಸರಿಸಿ ಒಳಗಿರುವ ಪಾನೀಯ ಹೀರುವುದೇ ಮಜಾ. ಈಗಿನ ಸಾಫ್ಟ್ ಡ್ರಿಂಕ್ಸ್ ಬರುವ ಮುಂಚೆಯೇ ಈ ಗೋಲಿ ಸೋಡಾ ಕರಾವಳಿಯಲ್ಲಿ ಚಾಲ್ತಿಯಲ್ಲಿತ್ತು.
ಇತ್ತೀಚಿನ ವರ್ಷಗಳಲ್ಲಿ ಪೆಪ್ಸಿ ,ಕೋಲಾ ,ಸ್ಪ್ರೈಟ್ ಇತ್ಯಾದಿ ಪೇಯಗಳ ಜೊತೆಗೆ ಈ ಸ್ಥಳೀಯ ಗೋಲಿ ಸೋಡಾ ಕುಡಿಯುವವರು ಯಾರಿದ್ದಾರೆ ಹೇಳಿ? ಉಡುಪಿಯಲ್ಲಿ ಗೋಲಿ ಸೋಡಾ ಎಂದ ತಕ್ಷಣ ಜನರ ನೆನಪಿಗೆ ಬರುವವರು ಶೀನ ನಾಯ್ಕರು. ಶೀನಣ್ಣ 60 ವರ್ಷಗಳಿಂದಲೂ ಸೋಡಾ ತಯಾರಿಸಿ, ಹಸಿರು ಬಣ್ಣದ ಬಾಟಲಿಗಳಲ್ಲಿ ತುಂಬಿ ಉಡುಪಿ ನಗರದ ಹಲವು ಅಂಗಡಿಗಳಿಗೆ ಪೂರೈಸುತ್ತಿದ್ದಾರೆ.
ಪ್ರಾರಂಭದಲ್ಲಿ ಗುಂಡಿಬೈಲಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ ಗೋಲಿ ಸೋಡಾದ ಎಬಿಸಿಡಿ ಕಲಿತರು. ಸೋಡಾ ತಯಾರಿಕೆ, ಬಾಟಲಿ ತೊಳೆಯುವುದು, ಸೈಕಲ್ ನಲ್ಲಿ ಅಂಗಡಿಗಳಿಗೆ ವಿತರಿಸುವುದು ಹೀಗೆ 45 ವರ್ಷ ಗೋಲಿ ಸೋಡಾದ ಜೊತೆ ಜೀವನ ನಿರ್ವಹಿಸಿದ ಬಳಿಕ ಮಾಲೀಕರು, ಇವರಿಗೇ ಅಂಗಡಿ ಸಾಮಾನು ಕೊಟ್ಟು ಸ್ವತಂತ್ರವಾಗಿ ಮುಂದುವರೆಸಿ ಎಂದರು. ಹಾಗೆ 15 ವರ್ಷಗಳಿಂದ ತಮ್ಮ ಪುಟ್ಟ ಮನೆಯಲ್ಲೇ ಸೋಡಾ ತಯಾರಿಸಿ ಮಾರುತ್ತಿದ್ದಾರೆ.
ಈಗಲೂ ಶೀನ ನಾಯ್ಕರು ತಮ್ಮ ಕಸುಬು ಬಿಟ್ಟಿಲ್ಲ. ಬೆಳಿಗ್ಗೆಯಿಂದ ಸಂಜೆ ತನಕ ಶ್ರದ್ಧೆಯ ದುಡಿಮೆ. ದುಡಿಮೆಗೆ ತಕ್ಕಷ್ಟು ಹಣ ಬರುತ್ತದೆ ಅಂತಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಇವರ ಮುಖದಲ್ಲೊಂದು ಸಂತೃಪ್ತಿಯ ನಗೆ ಇದೆ. ಮಾರುಕಟ್ಟೆಗೆ ಲಗ್ಗೆ ಇಟ್ಟ ಥರಹೇವಾರಿ ಪೇಯಗಳ ಜೊತೆಗೆ ಪೈಪೋಟಿಗಿಳಿಯದೇ ಗೋಲಿ ಸೋಡಾ ತಯಾರಿಸುತ್ತಿರುವ ಶೀನ ನಾಯ್ಕ, ಉಡುಪಿಯ ಗೋಲಿ ಸೋಡಾದ ಕೊನೆಯ ಕೊಂಡಿ ಎನ್ನಲಡ್ಡಿಯಿಲ್ಲ.
PublicNext
26/02/2022 04:52 pm