ಸುಳ್ಯ: ಧಾರಣೆ ಕುಸಿತದಿಂದ ಅಡಿಕೆ ಮಾರುಕಟ್ಟೆಯಲ್ಲಿ ಉಂಟಾದ ತಲ್ಲಣ ನಿಧಾನಕ್ಕೆ ಮರೆಯಾಗುತ್ತಿದ್ದು ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣುತ್ತಿದೆ. ಕಳೆದ 15 ದಿನಗಳ ಹಿಂದೆ ಕೆಜಿಗೆ 400 ರೂ ಆಸುಪಾಸಿನಲ್ಲಿದ್ದ ಹೊಸ ಅಡಿಕೆಯ ದರ ಈಗ ಏರಿಕೆಯಾಗಿದ್ದು 430 ಆಗಿದೆ. 435-440 ರೂ.ವರೆಗೆ ಇದ್ದ ಅಡಿಕೆ ದರ ಕೆಲವು ದಿನಗಳ ಹಿಂದೆ 400-410ಕ್ಕೆ ಇಳಿದಿತ್ತು. ಒಂದು ತಿಂಗಳಲ್ಲಿ ಹೆಚ್ಚು ಕಮ್ಮಿ 30-40 ರೂಗಳಷ್ಟು ಇಳಿಕೆ ಕಂಡಿತ್ತು. ಇದೀಗ ಕೆಲವು ದಿನಗಳಿಂದ ಅಡಿಕೆ ಧಾರಣೆ ಕೆಜಿಗೆ 20-30 ರೂ ಏರಿಕೆಯಾಗಿದ್ದು ಮಾರುಕಟ್ಟೆ ಚೇತರಿಕೆಯ ಹಾದಿಯಲ್ಲಿದೆ.
ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಜೂ.24ರಂದು ಹೊಸ ಅಡಿಕೆಗೆ ಕೆಜಿಗೆ ರೂ.430 ಇದೆ. ಹಳೆಯ ಅಡಿಕೆಗೆ ಕೆಜಿಗೆ 545 ರೂ ಧಾರಣೆ ಇದೆ. ಸುಳ್ಯ ನಗರದ ಇತರ ವ್ಯಾಪಾರಸ್ಥರಲ್ಲಿ 430 ರೂ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ತಾಲೂಕಿನ ಮತ್ತೊಂದು ಪ್ರಮುಖ ಪಟ್ಟಣ ಬೆಳ್ಳಾರೆಯಲ್ಲಿ ಅಡಿಕೆ ದರ 430-435 ಇದೆ ಎನ್ಮುತ್ತಾರೆ ಅಡಿಕೆ ವ್ಯಾಪಾರಸ್ಥರಾದ ಸಿದ್ದಿಕ್ ಕೊಕ್ಕೊ. ಅಡಿಕೆಯ ಗುಣಮಟ್ಟ ಅನುಸರಿಸಿ ಧಾರಣೆಯಲ್ಲಿ ಅಲ್ಪ ವ್ಯತ್ಯಾಸ ಕಂಡು ಬರುತ್ತಿದೆ. ಹೊಸ ಅಡಿಕೆ ಮಾತ್ರ ಈಗ ಮಾರುಕಟ್ಟೆಗೆ ಬರುತ್ತದೆ. ಹಳೆ ಅಡಿಕೆ ಅಸ್ಟಾಗಿ ಮಾರುಕಟ್ಟೆಗೆ ಬರುತ್ತಿಲ್ಲ.
ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಗೆ ಕೆಜಿಗೆ 430 ರೂ, ಹಳೆ ಅಡಿಕೆಗೆ 545 ರೂ ಇದೆ. ಪಟೋರಕ್ಕೆ ಹೊಸ ಅಡಿಕೆಗೆ ಕೆಜಿಗೆ 340 ರೂ, ಹಳೆ ಅಡಿಕೆ ಪಟೋರಕ್ಕೆ ಕೆಜಿಗೆ 385 ರೂ ಇದೆ. ಚೆಪ್ಪುಗೋಟುಗೆ ಕೆ.ಜಿಗೆ 250, ಕರಿಗೋಟುಗೆ ಕೆಜಿ 260 ರೂ ಇದೆ. ಆದರೆ ಅಡಿಕೆ ಮಾರುಕಟ್ಟೆಗೆ ಬರುವುದು ಈಗ ಸ್ವಲ್ಪ ಕಡಿಮೆ ಆಗಿದೆ ಎನ್ನುತ್ತಾರೆ ಕ್ಯಾಂಪ್ಕೋ ಸಂಸ್ಥೆಯ ಸುಳ್ಯ ವ್ಯವಸ್ಥಾಪಕರಾದ ಪ್ರದೀಪ್ ಕುಮಾರ್. ಕ್ಯಾಂಪ್ಕೋ ಸಂಸ್ಥೆಯ ಸುಳ್ಯ ಶಾಖೆ ಮತ್ತು ವಿವಿಧ ಉಪ ಶಾಖೆಗಳ ಮೂಲಕ ಪ್ರತಿ ದಿನ ಸರಾಸರಿ 100 ಕ್ವಿಂಟಲ್ ಅಡಿಕೆ ಬರುತ್ತಿತ್ತು. ಆದರೆ ಈಗ ಅಡಿಕೆ ಬರುವುದು ಅರ್ಧದಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಅವರು. ಮಾರು ಕಟ್ಟೆಯಲ್ಲಿನ ವ್ಯತ್ಯಾಸ ಗಮನಿಸಿ ಕೃಷಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಅಡಿಕೆ ಮಾತ್ರ ಮಾರಾಟ ಮಾಡುತ್ತಾರೆ.
Kshetra Samachara
24/06/2022 11:03 pm