ಕಾಪು: ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ಇಡೀ ದೇಶದಲ್ಲಿ ಚರ್ಚೆಯಲ್ಲಿದೆ. ಕೋರ್ಟ್ ಆದೇಶದಂತೆ ಮಸೀದಿಯ ಒಳಭಾಗದಲ್ಲಿ ಪರಿಶೀಲನೆ ನಡೆಸಲಾಗಿದೆ. ಬೇರೆ ಬೇರೆ ವರ್ಗದವರು ಬೇರೆ ಬೇರೆ ರೀತಿಯಲ್ಲಿ ಚರ್ಚೆಗಳನ್ನು ನಡೆಸುತ್ತಿರುವ ಸಂದರ್ಭ ಮೊನ್ನೆಯ ದಿನ ಯಾವ ರಾಶಿ, ಯಾವ ಲಗ್ನ, ಯಾವ ನಕ್ಷತ್ರದಲ್ಲಿ ಈ ಪ್ರಕ್ರಿಯೆ ನಡೆಯಿತು ಎಂಬುದನ್ನು ಉಡುಪಿಯ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ವಿಮರ್ಶೆ ಮಾಡಿದ್ದಾರೆ.
ಶುಭಕೃತ್ ಸಂವತ್ಸರದ, ವೃಷಭ ಮಾಸದ ವೈಶಾಖ ಶುದ್ಧ ಪೌರ್ಣಮಿ. ಅಲ್ಲದೆ ಸೋಮವಾರ ಈ ಪ್ರಕ್ರಿಯೆ ನಡೆದಿದೆ. ಸೋಮವಾರ ಮಧ್ಯಾಹ್ನ ಕರ್ಕಾಟಕ ಲಗ್ನ ಕಾಲದಲ್ಲಿ ಕಾಶಿ ವಿಶ್ವನಾಥನ ಸಾನಿಧ್ಯ ಶೋಧನೆ ಮಾಡಿದಾಗ ಗಂಗೆಯೊಳಗಿಂದ ಈಶ್ವರನ ಮೂಲ ಬಿಂಬವಾದ ಶಿವಲಿಂಗ ದರ್ಶನವಾಯ್ತು. ಅದೆಷ್ಟೋ ವರ್ಷದಿಂದ ವೃಷಭ (ನಂದಿ) ಕಾಯುತ್ತಾ ಇತ್ತು ಲಿಂಗ ದರ್ಶನಕ್ಕೆ.! ವೃಷಭ ಮಾಸದ ಮೊದಲ ದಿನವೇ ನಂದಿಯು ಪರಮೇಶ್ವರನ ದರ್ಶನ ಪಡೆದ. ನಾವೆಲ್ಲ ಕೇವಲ ನಿಮಿತ್ತ ಮಾತ್ರ ಎಂಬುದು ಇಲ್ಲಿ ಅರ್ಥ ಮಾಡಿಕೊಳ್ಳಬೇಕು.
ಶಿವಲಿಂಗ ದರ್ಶನವಾದ ಕ್ಷಣದ ಕುಂಡಲಿ ಏನು ಹೇಳುತ್ತದೆ..?
ಕರ್ಕ ಲಗ್ನ, ಲಗ್ನಕ್ಕೆ ಚತುರ್ಥ ಕೇತು, ಅಷ್ಟಮದಲ್ಲಿ ಶನಿ ಕುಜರ ಗ್ರಹ ಯುದ್ಧ, ಭಾಗ್ಯದಲ್ಲಿ ಲಗ್ನದಲ್ಲಿ ಉಚ್ಚನಾಗುವ ಗುರು ಸ್ವಕ್ಷೇತ್ರದಲ್ಲಿ. ವಿಶೇಷ ಎಂದರೆ ಆ ಗುರುವೂ ಲಗ್ನವನ್ನೇ ನೋಡುವುದು. ಲಗ್ನ ಪಂಚಮವನ್ನೂ ನೋಡುವುದು. ಈ ಮೂರೂ ಕ್ಷೇತ್ರಗಳೂ ಜಲ ತತ್ವದ ತ್ರಿಕೋಣ ರಾಶಿಗಳೇ. ಯಾಕೆ ಮತ್ತೊಂದು ಗಂಟೆಯ ನಂತರ ಶಿವಲಿಂಗ ಕಾಣಬಾರದಿತ್ತೇ? ಲಗ್ನಾಧಿಪತಿ ಚಂದ್ರನನ್ನೂ ಗುರು ವೀಕ್ಷಣೆ ಇನ್ನೊಂದು ವಿಶೇಷ. ಒಟ್ಟಿನಲ್ಲಿ ಇದೊಂದು ದೈವ ಪ್ರೇರಣೆ ಎನ್ನುತ್ತಾರೆ ಪ್ರಕಾಶ್ ಅಮ್ಮಣ್ಣಾಯ.
ನಕ್ಷತ್ರದ ಪ್ರಕಾರ ಅದೂ ಗುರು ನಕ್ಷತ್ರವೇ. ಗುರುವಿಗೆ ಪುನರ್ವಸು ನಕ್ಷತ್ರ (ರಾಮನ ನಕ್ಷತ್ರ), ಪೂರ್ವಾಭಾದ್ರ, ವಿಶಾಖ ನಕ್ಷತ್ರಗಳು ಬರುತ್ತದೆ. ಇವತ್ತಿನ ನಕ್ಷತ್ರಕ್ಕೆ ಗುರು ದಶೆಯೂ ಇದೆ. ಗುರು ಎಂದರೆ ರುದ್ರಾಂಶವೇ. ವಿಷ್ಣು ಅಂಶದ ಬುಧನಿಗೆ ನಿಪುಣ ಯೋಗ ಏಕಾದಶದಲ್ಲಿ. ಇದು ಕಿರೀಟ ಸ್ಥಾನ.
ಈ ಭೂಮಿಯ ಕಿರೀಟವೇ ಶ್ರೀರಾಮ ಚಂದ್ರ ಪ್ರಭು. ಅವನ ಮಂದಿರದ ಕುಂಭಾಭಿಷೇಕದ ಪೂರ್ವಭಾವಿಯಾಗಿ ರುದ್ರ ದೇವರು ಆಶೀರ್ವದಿಸಲು ಬಂದಂತಿದೆ. ಅಂದರೆ ನಾವು ಮಾನವರು. ನಮ್ಮ ಈಗಿನ ಆಡಳಿತವು ಲೋಪವಿಲ್ಲದೆ ಕೆಲಸ ಮಾಡುತ್ತಿದೆ. ಹಾಗಾಗಿ ದೇವ ದೇವರುಗಳು ಅನುಗ್ರಹ ನೀಡುತ್ತಿದ್ದಾರೆ ಎಂದರ್ಥ.
ಕಾಶೀ ದರ್ಶನವು ಶಿವನ ಸಕಲ ಪರಿವಾರವಿರುವ ಕೈಲಾಸ ದರ್ಶನ ಎಂಬುದರಲ್ಲಿ ಎರಡು ಮಾತಿಲ್ಲ. ಈವತ್ತಿನ ಸೂಚನೆಯ ಪ್ರಕಾರ ಶ್ರೀಕೃಷ್ಣ ಮಂದಿರ ಮಥುರಾ ನಗರಕ್ಕೂ ಮುಕ್ತಿ ದೊರಕಿಸಲಿದೆ. ಬಹುಶಃ ಏಕಕಾಲಕ್ಕೆ ಅಯೋಧ್ಯಾ, ಮಥುರಾ, ಕಾಶಿಗಳು ಆಕ್ರಮಣಕ್ಕೊಳಗಾಗಿ, ಅದೇ ಏಕಕಾಲಕ್ಕೆ ಮತ್ತೆ ಮುಕ್ತಿ ಪಡೆಯುವುದರ ಸೂಚನೆ ಈ ಕುಂಡಲಿಯಲ್ಲಿದೆ ಎಂದು ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ ಮಾಡಿದ್ದಾರೆ.
Kshetra Samachara
18/05/2022 09:25 pm