ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ವಿಶಿಷ್ಟ ರೀತಿಯಲ್ಲಿ ಸವಾಲೆಸಿದಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ನಿಖರವಾದ ಉತ್ತರ ಹೇಳಲು ಸಫಲರಾಗದೆ ಸೋತಿದ್ದಾರೆ.
ಮೇ 26ರಂದು ಬೆಳಗ್ಗೆ 11.33ಕ್ಕೆ ಏಳು ಲಕೋಟೆಗಳಲ್ಲಿ ವಿವಿಧ ದೇಶಗಳ ಕರೆನ್ಸಿ, ಕಾಗದಗಳು, ಬರವಣಿಗೆ ಬರೆದಿಟ್ಟ ಪೇಪರ್ ಅನ್ನು ಸೀಲ್ ಮಾಡಿ ಇಟ್ಟಿದ್ದಾರೆ. ಈ ಸವಾಲನ್ನು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದರೆ ಅವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಸರಿ ಉತ್ತರವನ್ನು ತಮ್ಮ ವಾಟ್ಸ್ಆ್ಯಪ್ ನಂಬರ್ ಹಾಗೂ ಇಮೈಲ್ ಗೆ ಕಳುಹಿಸಬಹುದು ಎಂದಿದ್ದರು.
ಈ ಹಿಂದೆಯೇ ನರೇಂದ್ರ ನಾಯಕ್ ರವರು ಹೇಳಿರುವಂತೆ ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೆಯ ಕವರ್ ನಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್, 3ನೆಯ ಕವರ್ 10 ದಿರಮ್, 4ನೆಯ ಕವರ್ ನಲ್ಲಿ ನೇಪಾಳದ 20 ರೂ., 5ನೆಯ ಕವರ್ ನಲ್ಲಿ ಸಿಂಗಾಪುರದ 10 ಡಾಲರ್ ದ ಬಿಲ್, 6ನೆಯದ್ದರಲ್ಲಿ Astrology Flopped miserably Once ಎಂದು ಬರೆಯಲಾಗಿತ್ತು. 7ನೆಯರದ್ದರಲ್ಲಿ 10 ರೂ. ನ ಇಂಡಿಯಾದ ಕರೆನ್ಸಿ ಇಡಲಾಗಿತ್ತು.
ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಉತ್ತರ ನೀಡಲು ಯತ್ನಿಸಿದ್ದಾರೆ. ಆದರೆ ನಾಲ್ವರು ನಿಖರವಾದ ಉತ್ತರ ನೀಡಲು ಸಫಲರಾಗಿಲ್ಲ. ಈ ನಾಲ್ಕು ಉತ್ತರದಲ್ಲಿ ಒಂದು ಕೇಳಿರುವ ಪ್ರಶ್ನೆಗೆ ಹೊರತಾಗಿರುವುದರಿಂದ ಮೂರನ್ನು ಮಾತ್ರ ಪರಿಗಣಿಸಲಾಗಿದೆ. ಇದರಲ್ಲಿ ಓರ್ವರು ಆರು ಖಾಲಿ ಲಕೋಟೆಗಳು ಎಂದು ಉತ್ತರಿಸಿದ್ದಾರೆ. ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ನೋಟು, ವೀಳ್ಯ, ಹೂ, ಕುಂಕುಮ- ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿದ್ದಾರೆ. ಈ ಮೂಲಕ ಎಲ್ಲಾ ಉತ್ತರಗಳು ತಪ್ಪಾಗಿದೆ. ಈ ಮೂಲಕ ಜೋತಿಷ್ಯ ಸುಳ್ಳು ಎಂಬ ತಮ್ಮ ವಾದವೇ ಗೆದ್ದಿದೆ ಎಂದು ನರೇಂದ್ರ ನಾಯಕ್ ಅವರು ಹೇಳಿದ್ದಾರೆ.
PublicNext
01/06/2022 01:21 pm