ಪುತ್ತೂರು: 2018 ರಲ್ಲಿ ಸರಕಾರ ರೈತರ ಸಾಲಮನ್ನಾ ಯೋಜನೆಯನ್ನು ಜಾರಿಗೊಳಿಸಿದ್ದರೂ, ಅರ್ಹ ರೈತರಿಗೆ ಈವರೆಗೂ ಈ ಸೌಲಭ್ಯ ದೊರೆತಿಲ್ಲ ಎಂದು ಭಾರತೀಯ ಕಿಸಾನ್ ಸಂಘ ಆರೋಪಿಸಿದ್ದು, ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲು ಸೆಪ್ಟೆಂಬರ್ 12 ರಂದು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸಮಿತಿ ಸದಸ್ಯ ಸುಬ್ರಾಯ ಶೆಟ್ಟಿ ತಿಳಿಸಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದ ಈ ಬಗ್ಗೆ ಸತತ ಪ್ರಯತ್ನದ ಬಳಿಕವೂ ಹಲವಾರು ಪ್ರಾಥಮಿಕ ಸಹಕಾರಜ ಸಂಘಗಳಲ್ಲಿ ಸಾಲಗಾರ ಸದಸ್ಯರಿಗೆ ಸಾಲಮನ್ನಾದ ಸೌಲಭ್ಯ ದೊರಕಿರುವುದಿಲ್ಲ. ಈ ಬಗ್ಗೆ ರೈತರು ಹಲವು ಬಾರಿ ವಿಧಾನಸಭೆಗೆ ಭೇಟಿ ನೀಡಿ ಸಹಕಾರಿ ಸಚಿವರಿಗೆ ಮನವರಿಕೆ ಮಾಡಿದ್ದರೂ ಯಾವುದೇ ಪರಿಣಾಮವಾಗಿಲ್ಲ.
ಅಲ್ಲದೆ ಹೈನುಗಾರಿಕೆ ಇತ್ತೀಚಿನ ದಿನಗಳಲ್ಲಿ ತುಟ್ಟಿಯಾಗುತ್ತಿದ್ದು, ಹಾಲಿಗೆ ಲೀಟರ್ ಗೆ ಕನಿಷ್ಟ 75 ರೂಪಾಯಿ ಸಿಕ್ಕರೆ ಮಾತ್ರ ರೈತರು ನೆಮ್ಮದಿಯಿಂದ ಬದುಕಬಹುದಾಗಿ ಈ ನಿಟ್ಟಿನಲ್ಲೂ ಸರಕಾರ ಗಮನಹರಿಸಬೇಕಿದೆ. ದಕ್ಷಿಣಕನ್ನಡ ಜಿಲ್ಲೆಯ ಕೃಷಿಕರು ಕಳೆದ 32 ವರ್ಷಗಳಿಂದ ನಡೆಸುತ್ತಿರುವ ಕುಮ್ಕಿ ಭೂಮಿಯ ಸಮಸ್ಯೆಯೂ ಈವರಗೂ ನಿವಾರಣೆಯಾಗಿಲ್ಲ. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಸರಕಾರದ ಗಮನಸೆಳೆಯುವ ಪ್ರಯತ್ನವನ್ನು ಧರಣಿ ಮೂಲಕ ಮಾಡಲಾಗುವುದು ಎಂದರು.
ಪುತ್ತೂರಿನ ದರ್ಬೆ ವೃತ್ತದಿಂದ ಕಾಲ್ನಡಿಗೆಯಲ್ಲಿ ಬಂದು ರೈತರು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸೇರಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
Kshetra Samachara
09/09/2022 12:15 pm