ಪೆರ್ಲ: ಮಳೆಗಾಲ ಕಳೆದು ಬೇಸಿಗೆ ಆರಂಭಗೊಂಡಾಗ ಕೃಷಿ ತೋಟಗಳಿಗೆ ನೀರಿನ ಅಭಾವ ಕಾಡೋದು ಸಾಮಾನ್ಯ. ಆದರೆ, ಕಾಸರಗೋಡು ಜಿಲ್ಲೆಯ ಪೆರ್ಲ ಭಾಗದ ಕೃಷಿಕರಿಗೆ ಮಾತ್ರ ಈ ಸಮಸ್ಯೆ ಅಷ್ಟಾಗಿ ಬಾಧಿಸೋದಿಲ್ಲ. ಕಾರಣ, ಈ ಜನರು ತಮ್ಮ ಊರಿನಲ್ಲಿ ಹರಿಯುವ ಹಳ್ಳ-ತೊರೆಗಳ ನೀರನ್ನು ಪೋಲಾಗದಂತೆ ಕಾಪಾಡಿಕೊಂಡು ಬರುತ್ತಿದ್ದಾರೆ. ಹರಿಯುವ ನೀರಿಗೆ ಸಾಂಪ್ರದಾಯಿಕ ಕಟ್ಟಗಳನ್ನು ಕಟ್ಟಿ ಸಂರಕ್ಷಿಸುವ ಇಲ್ಲಿನ ಕೃಷಿಕರಿಗೆ ಬೇಸಿಗೆ ಸಮಯ ಈ ಕಟ್ಟಗಳೇ ʼಜಲಾಶಯʼ.
ಇಲ್ಲಿನ ಏತಡ್ಕ, ಸಜಂಗದ್ದೆ ಸಹಿತ ಹಲವು ಗ್ರಾಮದ ಜನರು ಮಳೆಗಾಲ ಮುಗಿದ ಬಳಿಕ ನೀರಿನ ಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಮ್ಮ ತಮ್ಮ ತೋಟದ ಮಧ್ಯೆ ಅಥವಾ ಪಕ್ಕದಲ್ಲಿ ಹರಿಯುವ ಸಣ್ಣ-ಪುಟ್ಟ ಹಳ್ಳ-ತೊರೆಗಳ ನೀರನ್ನು ತೋಟದ ಬಳಿಯೇ ಸಂಗ್ರಹಿಸಿಟ್ಟು ಬೇಸಿಗೆಗೆ ಬೇಕಾದಷ್ಟು ನೀರನ್ನು ಸಂಗ್ರಹಿಸುವ ಜೊತೆಗೆ ಕೆರೆ, ಬಾವಿ, ಕೊಳವೆಬಾವಿ ಬತ್ತಿ ಹೋಗದಂತೆ ನೋಡಿಕೊಳ್ಳುತ್ತಾರೆ.
ಹೌದು, ಇಲ್ಲಿನ ಪ್ರತಿ ಹಳ್ಳ-ತೊರೆಗೆ ನೂರಾರು ಕಟ್ಟಗಳನ್ನು ಕಟ್ಟಿ ಇಲ್ಲಿನವರು ತಮಗೆ ಬೇಕಾದ ನೀರನ್ನು ಸಂಗ್ರಹಿಸಿಟ್ಟು, ಉಳಿದ ನೀರನ್ನು ಮುಂದೆ ಸಾಗಲು ಬಿಡುತ್ತಾರೆ. ಹೀಗೆ ಬಿಟ್ಟ ನೀರನ್ನು ಮುಂದೆ ಇರುವ ಕೃಷಿ ತೋಟದ ಕೃಷಿಕರೂ ಕೂಡ ಕಟ್ಟಗಳನ್ನು ಕಟ್ಟಿ ತಮಗೆ ಬೇಕಾದ ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಈ ಭಾಗಕ್ಕೆ ʼಕಟ್ಟಗಳ ಊರುʼ ಎಂದೂ ಹೆಸರಾಗಿದೆ ಎನ್ನುತ್ತಾರೆ ಓರ್ವ ಕಟ್ಟ ನಿರ್ಮಾತೃ ಶ್ರೀಹರಿ ಭಟ್.
PublicNext
07/01/2022 09:44 am