ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡ್ ನಲ್ಲಿ ಜನವರಿ 14,15,16ರಂದು ರಾಜ್ಯಮಟ್ಟದ ಕೃಷಿ ಮೇಳ ಕೃಷಿ ಸಿರಿ-2022 ನಡೆಯಲಿದೆ ಎಂದು ಸಮಿತಿಯ ಗೌರವ ಅಧ್ಯಕ್ಷ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಮುಲ್ಕಿಯ ಪುನರೂರು ಟೂರಿಸ್ಟ್ ಹೋಂ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
"ಇಂದಿನ ಯುವಜನತೆಗೆ ಕೃಷಿಯ ಮೇಲಿನ ಮಮತೆ ಕಡಿಮೆಯಾಗುತ್ತಿದೆ. ಸಾಂಪ್ರದಾಯಿಕ ಕೃಷಿ ಪದ್ಧತಿ ನಾಶ ಹೊಂದುತ್ತಿದೆ. ಅದನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಬದುಕಿನ ಹಿನ್ನೆಲೆ, ಗೋವು ಸಾಕಾಣಿಕೆ, ವ್ಯವಸಾಯದ ಬಗ್ಗೆ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಮಾರ್ಗದರ್ಶನ ನೀಡಲಾಗುವುದು. ಕೃಷಿಗೆ ಸಂಬಂಧಪಟ್ಟಂತೆ ವಿವಿಧ ಕೌಂಟರ್ ಗಳನ್ನು ತೆರೆದು ಪ್ರಾತ್ಯಕ್ಷಿಕೆ ನೀಡಲಾಗುವುದು, ಮೂರು ದಿನಗಳ ಕಾರ್ಯಕ್ರಮವನ್ನು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ಘಾಟಿಸಲಿದ್ದಾರೆ" ಎಂದು ಶಾಸಕರು ಹೇಳಿದರು.
ವಿನಯ ಕೃಷಿ ಬೆಲೆಗಾರರ ಸಂಘ(ರಿ.) ಕೊಲ್ನಾಡು, ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಮಂಗಳೂರು ವಿಶ್ವವಿದ್ಯಾನಿಲಯ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಸಾವಯವ ಕೃಷಿ ಗ್ರಾಹಕ ಬಳಗ ಸೇರಿದಂತೆ ಸ್ಥಳೀಯ ಸಂಘಟನೆಗಳು ಕೃಷಿ ಮೇಳದ ಜವಾಬ್ದಾರಿ ಹೊತ್ತುಕೊಂಡಿವೆ.
ಸುಮಾರು 10 ಎಕರೆ ಸ್ಥಳದಲ್ಲಿ ಕೃಷಿಗೆ ಸಂಬಂಧಪಟ್ಟ 200ಕ್ಕೂ ಅಧಿಕ ಸ್ಟಾಲ್ ಗಳನ್ನು ತೆರೆದು ಕೃಷಿಕರಿಗೆ ಮಾಹಿತಿ ವಿನಿಮಯ ಕಾರ್ಯಕ್ರಮ ಹಾಗೂ ವಿವಿಧ ವಿಷಯಕ್ಕೆ ಸಂಬಂಧಿಸಿ ವಿಚಾರ ಗೋಷ್ಠಿ, ಪಾರಂಪರಿಕ ಕೃಷಿ ಬದುಕಿನ ಬಗ್ಗೆ ಪರಿಚಯಿಸಲಾಗುವುದು ಎಂದು ಮಾಹಿತಿ ನೀಡಿದರು.
ತುಳುನಾಡಿನ ಕೃಷಿ ಬದುಕಿನ ಜೊತೆಗೆ ನಾಗಾರಾಧನೆ, ಭೂತಾರಾಧನೆ, ತಾರಸಿ ಕೃಷಿ ಸಹಿತ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿಕರಿಗೆ ಸಿಗುವ ಆರ್ಥಿಕ ಸೌಲಭ್ಯ, ಬ್ಯಾಂಕ್ ಲೋನ್ ಸೌಲಭ್ಯ, ಮಕ್ಕಳಿಗೆ ಕ್ರೀಡಾ ವ್ಯವಸ್ಥೆ, ಫುಡ್ ಕೋರ್ಟ್ ವ್ಯವಸ್ಥೆ ಮಾಡಲಾಗುವುದು ಎಂದರು
ಇದೇ ಸಂದರ್ಭದಲ್ಲಿ ಕೃಷಿ ಮೇಳದ ಆಮಂತ್ರಣ ಪತ್ರಿಕೆಯನ್ನು ಶಾಸಕರು ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ,ಸಂಚಾಲಕ ಕೃಷ್ಣ ಶೆಟ್ಟಿ ತಾರೆಮಾರ್, ಜಗದೀಶ್ ಪೈ, ಮಾಧ್ಯಮ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ, ನವೀನ್ ಶೆಟ್ಟಿ ಎಡ್ಮೆಮಾರ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸಮಿತಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜಿ.ಆರ್. ಪ್ರಸಾದ್, ಸಮಿತಿ ಚಂದ್ರಹಾಸ್, ಸೋಮಪ್ಪ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/01/2022 07:58 pm