ವರದಿ: ರಹೀಂ ಉಜಿರೆ
ಕಟಪಾಡಿ: ಅಕಾಲಿಕ ಮಳೆಯಿಂದಾಗಿ ಕರಾವಳಿಯಲ್ಲಿ ಭತ್ತ ಬೆಳೆಗಾರರು ಕಂಗಾಲಾಗಿದ್ದಾರೆ. ಈಗ ಮಲ್ಲಿಗೆ ಬೆಳೆಗಾರರ ಸರದಿ. ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಅಪರೂಪದ ಹೂ ಬೆಳೆಯುವ ಕೃಷಿಕರಿಗೆ ದಿಕ್ಕೇ ತೋಚದಂತಾಗಿದೆ.
ಕರಾವಳಿಯಲ್ಲಿ ಹಬ್ಬ ಹರಿದಿನ, ಶುಭ ಸಮಾರಂಭ ಆರಂಭವಾಗುತ್ತಲೇ ಮಲ್ಲಿಗೆ ಬೆಲೆ ಕೂಡ ಉತ್ತಮವಾಗಿತ್ತು. ಆದರೆ, ಸಂಜೆ ಸುರಿಯುವ ನಿರಂತರ ಮಳೆಯಿಂದಾಗಿ ಇಳುವರಿ ಸಂಪೂರ್ಣ ಕುಸಿದಿದ್ದು, ಬೆಲೆ ಇದ್ದರೂ ಫಸಲು ಕೈಗೆ ಸಿಗದ ಪರಿಸ್ಥಿತಿ.
ಇಲ್ಲಿನ ಶಂಕರಪುರ ಮಲ್ಲಿಗೆಗೆ ಮುಂಬೈ ಸಹಿತ ವಿದೇಶದಲ್ಲೂ ಭಾರಿ ಬೇಡಿಕೆ.
ಇಷ್ಟೇ ಅಲ್ಲ, ಪೇಟೆಂಟ್ ಪಡೆದ ಕರಾವಳಿಯ ಏಕಮಾತ್ರ ಹೂವು ಮಲ್ಲಿಗೆ. ಆದರೆ, ಈ ವರ್ಷ ಮಲ್ಲಿಗೆ ಇಳುವರಿಯಲ್ಲಿ ಭಾರಿ ಕುಂಠಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಅಕಾಲಿಕ ಮಳೆ.
ಶಂಕರಪುರ ಮಲ್ಲಿಗೆಗೆ ಉತ್ತಮ ಬಿಸಿಲಿದ್ದರೆ ಒಳ್ಳೆಯ ಇಳುವರಿ. ಆದರೆ, ಹಗಲು ಮೋಡ ಕವಿದ ವಾತಾವರಣ ಹೆಚ್ಚಾಗಿರುವ ಕಾರಣ, ಸರಿಯಾಗಿ ಬಿಸಿಲು ಬೀಳದೆ ಮಲ್ಲಿಗೆ ಇಳುವರಿಯಲ್ಲಿ ಕುಸಿತ ಕಾಣುತ್ತಿದೆ. ಇನ್ನು ಶಂಕರಪುರ ಮಲ್ಲಿಗೆಗೆ ಮಿತವಾಗಿ ನೀರು ಬೇಕು. ಆದರೆ, ನವೆಂಬರ್‌ನಲ್ಲೂ ಮಳೆ ಬಂದ ಕಾರಣ ಬುಡದಲ್ಲೇ ನೀರು ನಿಂತು ಬೇರು ಕೊಳೆತು, ಇಳುವರಿ ಕುಂಠಿತಕ್ಕೆ ಕಾರಣವಾಗಿದೆ.
ಉಡುಪಿಯ ಕಟಪಾಡಿ, ಮಟ್ಟು, ಶಂಕರಪುರ ಪ್ರದೇಶದ ಪ್ರತಿ ಮನೆಯಲ್ಲೂ 3ರಿಂದ 5 ಸೆಂಟ್ಸ್ ಜಾಗದಲ್ಲಿ ಈ ಪೇಟೆಂಟ್ ಪಡೆದ ಮಲ್ಲಿಗೆ ಬೆಳೆಯುತ್ತಾರೆ. ಹೀಗಾಗಿ ಇವರಿಗೆ ಪರಿಹಾರವೂ ಸಿಗುವುದಿಲ್ಲ. ಸರ್ಕಾರ ಹೆಕ್ಟೇರ್ ಲೆಕ್ಕದಲ್ಲಿ ಪರಿಹಾರ ಕೊಡುವ ಕಾರಣ ಸಣ್ಣ ಕೃಷಿಕರಿಗೆ ಅದೂ ಸಿಗುತ್ತಿಲ್ಲ. ಹೀಗಾಗಿ ಪ್ರಕೃತಿ ವೈಪರೀತ್ಯಕ್ಕೆ ಕೊರಗುತ್ತಾ, ಮಲ್ಲಿಗೆ ಕೃಷಿಕರು ದಾರಿ ಕಾಣದೆ ಕುಳಿತುಕೊಳ್ಳುವಂತಾಗಿದೆ.
Kshetra Samachara
01/12/2021 08:56 pm