ಬ್ರಹ್ಮಾವರ: ಬ್ರಹ್ಮಾವರದ ಸಕ್ಕರೆ ಕಾರ್ಖಾನೆ ಪುನರ್ ನಿರ್ಮಾಣ ಕಾರ್ಯಕ್ಕೆ ಪೂರಕವಾಗಿ ಕಬ್ಬನ್ನು ಅರೆಯುವ ಮಹತ್ವಾಕಾಂಕ್ಷೆಯೊಂದಿಗೆ ಬೆಲ್ಲದ ಆಲೆಮನೆ ಪ್ರಾರಂಭವಾಗಿದೆ.
ಈ ಬಗ್ಗೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ,
ಈಗಾಗಲೇ ರೈತರು ಬೆಳೆದಿರುವ ಕಬ್ಬಿಗೆ ಸೂಕ್ತ ಬೆಲೆ ನೀಡಿ ಬೆಲ್ಲದ ಆಲೆಮನೆಯ ಮೂಲಕ ಈ ಕಬ್ಬನ್ನು ಅರೆದು ಶುದ್ಧ ಬೆಲ್ಲ ತಯಾರಿಸಿ ಮುಕ್ತ ಮಾರುಕಟ್ಟೆಗೆ ನೀಡಲಾಗುವುದು ಎಂದಿದ್ದಾರೆ.
ಈ ಆಲೆಮನೆ ದಿನಕ್ಕೆ ಹದಿನೈದು ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯ ಹೊಂದಿದ್ದು, ಮುಂದಿನ ಸಾಲಿನಲ್ಲಿ ಉಡುಪಿ ಜಿಲ್ಲೆಯ ರೈತರು ಬೆಳೆಯುವ ಕಬ್ಬಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಖಾನೆಯ ಆವರಣದಲ್ಲಿ ಈ ರೀತಿಯ ಹತ್ತು ಆಲೆಮನೆಗಳನ್ನು ನಿರ್ಮಾಣ ಮಾಡುವ ಬಗ್ಗೆ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಕಬ್ಬು ಬೆಳೆಯುವ ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ನಾವು ಮಾಡಲಿದ್ದೇವೆ ಮತ್ತು ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯಾದ್ಯಂತ ನೂರು ಗ್ರಾಮಗಳನ್ನು ಗುರುತಿಸಿದ್ದು 1 ಸಾವಿರ ಎಕರೆ ಕಬ್ಬು ಬೆಳೆಯುವ ಗುರಿ ಹೊಂದಿದ್ದೇವೆ. ಕಬ್ಬು ವಿಸ್ತರಣೆಗಾಗಿ ರೈತರನ್ನು ಸಂಪರ್ಕಿಸಲು ನೂರು ಜನ ಯುವಕರನ್ನು ಈಗಾಗಲೇ ಗುರುತಿಸಿದ್ದು, ಒಬ್ಬೊಬ್ಬರಿಗೆ 1 ಗ್ರಾಮದ ಜವಾಬ್ದಾರಿ ನೀಡಿ ರೈತರಲ್ಲಿ ಉತ್ತೇಜನ ನೀಡುವ ಯೋಜನೆ ಕಾರ್ಖಾನೆಗೆ ಇದೆ ಎಂದರು.
ಈ ಎಲ್ಲ ಸಕಾರಾತ್ಮಕ ಬೆಳವಣಿಗೆಗಳಿಂದಾಗಿ ಉತ್ತಮವಾದ ತಾಜಾ ಬೆಲ್ಲ ಇನ್ನು ಮುಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಮಾರುಕಟ್ಟೆಗೆ ಬರಲಿದೆ.
Kshetra Samachara
25/02/2021 05:09 pm