ಮುಲ್ಕಿ : ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಮೂಲಸ್ಥಾನ ಕುದ್ರುವಿನ ಭೂಮಿಯಲ್ಲಿ ದೇಗುಲದ ಸಿಬಂದಿಗಳೇ ಸೇರಿ ಕೊರೊನಾ ಲಾಕ್ ಡೌನ್ ಸಂದರ್ಭ ಭತ್ತದ ಕೃಷಿ ಮಾಡಿದ್ದು, ಇದೀಗ ಒಳ್ಳೆಯ ಫಸಲು ಬಂದಿದೆ.
ಲಾಕ್ ಡೌನ್ ಸಂದರ್ಭ ಭಕ್ತರಿಗೆ ಪ್ರವೇಶ ಇರಲಿಲ್ಲ. ಪರಿಣಾಮ ಭೋಜನ ಶಾಲೆ, ಕಚೇರಿಯಲ್ಲಿ ಸೀಮಿತ ಸಂಖ್ಯೆ ಸಿಬಂದಿ ಬಂದರೂ ಅವರಿಗೆ ಹೇಳಿಕೊಳ್ಳುವಂತಹ ಕೆಲಸವಿರಲಿಲ್ಲ. ಸುಮ್ಮನೇ ಕೂತು ಹೋಗುವ ಬದಲು ಸಮಯದ ಸದುಪಯೋಗ ಮಾಡುವ ದೃಷ್ಟಿಯಿಂದ ಹುಟ್ಟಿಕೊಂಡ ಯೋಚನೆ ಭತ್ತ ಕೃಷಿ. ಬ್ರಹ್ಮಕಲಶೋತ್ಸವ ಸಂದರ್ಭ ನಾಗಮಂಡಲ ನಡೆದ ಚಪ್ಪರದ ಬಳಿ ಇದ್ದ ಖಾಲಿ ಸ್ಥಳದಲ್ಲಿ ದೇಗುಲದ ಸಿಬಂದಿಯೇ ಸೇರಿ ಉತ್ತರು, ನೇಜಿ ನೆಟ್ಟರು.
ಇದೀಗ ಆ ಭತ್ತದ ಕಟಾವು ಮಾಡಿ, ಭತ್ತ ಬೇರ್ಪಡಿಸಿದರು. ನಾಲ್ಕು ಕಳಸೆಯಷ್ಟು ಭತ್ತ ಬೆಳೆದು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಮತ್ತೆ ಸುಗ್ಗಿ ಬೆಳೆಗೆ ತಯಾರಾಗಿದ್ದಾರೆ. ಈಗ ಬೆಳೆದಿರುವ ಕಜೆ ಜಯ ಭತ್ತದ ಬೀಜವನ್ನು ಮಿತ್ತಬೈಲು ಪುರುಷೋತ್ತಮ ಕೋಟ್ಯಾನ್ ನೀಡಿದ್ದು, ಮುಂದಿನ ಸುಗ್ಗಿ ಬೆಳೆಗೆ ಪಾರಂಪರಿಕ ಅತಿಕಾರ(ಸತ್ಯದ ಬೆಳೆ)ದ ಬೀಜವನ್ನೂ ನೀಡಿದ್ದಾರೆ. ಭೋಜನಾಲಯದಲ್ಲಿ ಬಡಿಸುವ, ಕಚೇರಿ ಕೆಲಸದ ಸಿಬಂದಿ ಬ್ರಹ್ಮಕಲಶೋತ್ಸವ ಸಂದರ್ಭ ಶ್ರಮದಾನದ ಮೂಲಕ ಸ್ವಚ್ಛತೆ ಕಾರ‍್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದೀಗ ಭತ್ತ ಕೃಷಿಯಲ್ಲೂ ಖುಷಿಪಟ್ಟಿದ್ದಾರೆ.
ಇಲ್ಲಿ ಬೆಳೆದ ತೆನೆ ದೇಗುಲದ ಕೊರಳ ಹಬ್ಬಕ್ಕೆ ಬಳಸಲಾಗಿದೆ. ಈಗ ಬೆಳೆದಿರುವ ಭತ್ತ ದೀಪಾವಳಿ ಧಾನ್ಯದ ಪೂಜೆಗೆ ಉಪಯೋಗಿಸಿ, ದೇವಸ್ಥಾನದ ನೈವೇದ್ಯಕ್ಕೆ ಉಪಯೋಗಿಸಲಾಗುತ್ತದೆ ಎನ್ನುತ್ತಾರೆ ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ. ದೇವಸ್ಥಾನದ ಕೊರಳ ಹಬ್ಬಕ್ಕೆ, ಧಾನ್ಯದ ಪೂಜೆಗೆ ಭತ್ತ ನಾವೇ ಬೆಳೆಸಿದ್ದು ಮತ್ತು ಇದು ನೈವೇದ್ಯಕ್ಕೂ ಬಳಕೆಯಾಗುವುದು ಖುಷಿಕೊಟ್ಟಿದೆ. ಕೃಷಿ ಇನ್ನೂ ಮುಂದುವರಿಸುತ್ತೇವೆ ಎನ್ನುತ್ತಾರೆ ಸಿಬಂದಿ.
Kshetra Samachara
28/10/2020 12:46 pm