ಉಡುಪಿ: ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಶಿರ್ವ ವಲಯ ವತಿಯಿಂದ ಗೋಶಾಲೆಗಾಗಿ ಬೈಹುಲ್ಲು ಸಂಗ್ರಹ ಅಭಿಯಾನವನ್ನು ಒಂದು ವಾರ ನಡೆಸಿ ಸುಮಾರು 325 ಕಟ್ಟು ಬೈಹುಲ್ಲನ್ನು ಸಂಗ್ರಹಿಸಿ ನೀಲಾವರ ಗೋಶಾಲೆಗೆ ಸಾಗಿಸಲು ಹಿರಿಯ ಹಿಂದೂ ನೇತಾರರಾದ ಬೆಳ್ಳೆ ಅಂಗಡಿ ಸದಾನಂದ ಶೆಣೈ ಹಾಗೂ ವಿಶ್ವ ಹಿಂದು ಪರಿಷತ್ ಶಿರ್ವ ವಲಯದ ಗೌರವಾಧ್ಯಕ್ಷ ಬೆಳ್ಳೆ ಮಧ್ವರಾಜ ಭಟ್ ಬೆಳ್ಳೆ ಚಾಲನೆ ನೀಡಿದರು.
ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೆಳ್ಳೆ ಮಧ್ವರಾಜ ಭಟ್,
ಸೂರ್ಯೋದಯದಲ್ಲಿ ಎದ್ದು ಪ್ರತಿ ಹಿಂದೂ 8 ಶುಭ ವಸ್ತುಗಳನ್ನು ದರ್ಶನ ಮಾಡಬೇಕು. ಅದರಲ್ಲಿ ಮೊದಲಿಗೆ ಗೋವಿನ ದರ್ಶನ ಮಾಡಬೇಕೆಂದು ಶಾಸ್ತ್ರ ತಿಳಿಸಿದೆ ಪ್ರಸ್ತುತ ಹೆಚ್ಚಿನವರು 3 ರಿಂದ 10 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ವಾಸ್ತವ್ಯವಿರುವುದರಿದ ಪ್ರತಿ ಮನೆಯವರು ಗೋವು ಸಾಕಲು, ದರ್ಶನ ಮಾಡಲು ಕಷ್ಟಸಾಧ್ಯ. ಹಿಂದುಗಳು ಗೋ ಸೇವೆ ಮಾಡಲೇಬೇಕು. ಸಾಕಲು ಆಗದಿದ್ದರೂ ಸಾಕುವವರಿಗೆ ಪ್ರೋತ್ಸಾಹ ನೀಡುವುದು, ಗೋಗ್ರಾಸ ನೀಡುವುದು ಮಾಡಬಹುದು.
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ನೀಲಾವರದಲ್ಲಿ ಸಾವಿರಾರು ಅನಾಥ ಗೋವುಗಳನ್ನು ಸಾಕಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಅವರೊಂದಿಗೆ ನಾವೂ ಕೈಜೋಡಿಸಿ ಅಳಿಲ ಸೇವೆ ಮಾಡುವುದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ. ಇದನ್ನು ಸದುಪಯೋಗ ಮಾಡಿಕೊಂಡು ನಿರಂತರವಾಗಿ ಸಮಾಜಕ್ಕಾಗಿ, ಗೋವಿಗಾಗಿ ಇಂಥ ಕೆಲಸ ಮಾಡಲು ನಮ್ಮನ್ನು ತೊಡಗಿಸಿಕೊಳ್ಳೋಣ ಎಂದರು.
ಅವಿನಾಶ ಆಚಾರ್ಯ ಸ್ವಾಗತಿಸಿದರು. ವಿಶ್ವ ಹಿಂದು ಪರಿಷತ್ ಶಿರ್ವ ವಲಯದ ಅಧ್ಯಕ್ಷ ಬೆಳ್ಳೆ ವಿಶ್ವನಾಥ ಶೆಟ್ಟಿ ವಂದಿಸಿದರು.
Kshetra Samachara
07/12/2020 05:50 pm