ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಟಾವು ಮೆಷಿನ್ ದರ ನಿಯಂತ್ರಣಕ್ಕೆ ಸರಕಾರ ಮುಂದಾಗಲಿ; ಇದು ಕರಾವಳಿ ಕೃಷಿಕರ ಒತ್ತಾಯ

ಮಂಗಳೂರು: ಹಿಂದೆ ಹೊಲ ಗದ್ದೆ ಕೆಲಸಗಳಿಗೆ ಸಿಕ್ಕ ಹಾಗೆ ಕೂಲಿಯಾಳುಗಳು ಇಂದು ಸಿಗುತ್ತಿಲ್ಲ ಅನ್ನೋ ಕೊರಗಿದೆ. ಆದ್ದರಿಂದ ಅನಿವಾರ್ಯವಾಗಿ ಕೃಷಿ ಮಾಡುವವರು ಯಂತ್ರೋಪಕರಣದ ಮೊರೆ ಹೋಗಿದ್ದಾರೆ.

ಹಿಂದೆಲ್ಲ ಭತ್ತದ ನಾಟಿ ಮಾಡಲು, ಕಟಾವು ಮಾಡಲು ಕರಾವಳಿ ಭಾಗದಲ್ಲಿ ಪುರುಷರಿಗಿಂತ ಮಹಿಳೆಯರೇ ಒಂದು ಕೈ ಮೇಲೆನಿಸಿಕೊಂಡಿದ್ದರು.

ಆದರೆ ಇಂದು ಕಾಲ ಬದಲಾಗಿದೆ, ಹೊಲ ಗದ್ದೆಯ ಕೆಲಸಗಳಿಗೆ ಜನ ಸಿಗುತ್ತಿಲ್ಲ. ಆದ್ದರಿಂದ ನಾಟಿ ಬದಲು ಬಿತ್ತನೆ, ಕಟಾವಿಗೆ ಮೆಷಿನ್ ಅವಲಂಬಿಸಿಕೊಂಡಿದ್ದಾರೆ. ಆದರೆ ಲಾಕ್ ಡೌನ್ ನಲ್ಲಿ ಊರಲ್ಲೇ ಬಾಕಿಯಾಗಿದ್ದ ಅದೆಷ್ಟೋ ಯುವಕರು ಹಡೀಲು ಬಿದ್ದ ಗದ್ದೆಯಲ್ಲಿ ಫಸಲು ನಳನಳಿಸುವಂತೆ ಮಾಡಿದ್ದಾರೆ.

ಈಗ ಏನಿದ್ದರೂ ಕರಾವಳಿಯಾದ್ಯಂತ ಭತ್ತ ಕಟಾವಿನ ಸಮಯ. ಬಹುತೇಕ ಕಡೆಗಳಲ್ಲಿ ಭತ್ತ ಕಟಾವು ಅಂತಿಮ ಹಂತಕ್ಕೆ ಬಂದಿದೆ.

ಅದರೆ, ಭತ್ತ ಕಟಾವಿಗೆ ಜನ ಸಿಗದ ಕಾರಣ ಕೃಷಿಕರು ಹೊರ ರಾಜ್ಯದಿಂದ ಬರುವ ಕಟಾವು ಮೆಷಿನ್ ಗಾಗಿ ಮಧ್ಯವರ್ತಿಗಳ ಮೂಲಕ ಸಂಪರ್ಕಿಸುತ್ತಾರೆ. ಈ ಮೆಷಿನ್ ಕಟಾವು ನಡೆಸಿ ತೆನೆ ಹಾಗೂ ಬೈ ಹುಲ್ಲನ್ನ ಪ್ರತ್ಯೇಕಿಸುತ್ತೆ. ಆದರೆ ಈ ಮೆಷಿನ್ ದುಡಿಮೆಗೆ ಗಂಟೆಗೆ 2 ರಿಂದ 3.5 ಸಾವಿರ ರೂ.ವರೆಗೂ ಪಾವತಿಸಬೇಕಾಗುತ್ತದೆ.

"ಕರಾವಳಿಯಲ್ಲಿ ಕೆಲಸಗಾರರು ಸಿಗುತ್ತಿಲ್ಲ. ಮೆಷಿನ್ ಇಲ್ಲದೇ ಹೋದರೆ ಇಷ್ಟೂ ಕೃಷಿ ಚಟುವಟಿಕೆ ನಡೆಸಲು ಅಸಾಧ್ಯ. ಆದರೆ ಹೆಚ್ಚು ಹೆಚ್ಚು ಗದ್ದೆಗಳಿದ್ದರೆ ದರದ ಸಮಸ್ಯೆ ಅಷ್ಟಾಗಿ ಕಾಣಿಸದು.

ಆದರೆ ಒಂದೋ, ಎರಡೋ ಗದ್ದೆ ಇರೋರಿಗೆ ಮೆಷಿನ್ ಗೆ ನೀಡೋ ಹಣ ಹೆಚ್ಚು ದುಬಾರಿ ಎನಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕೂಲಿ ಕಾರ್ಮಿಕರನ್ನ ಹಿಡಿದುಕೊಂಡರೂ ಅಷ್ಟೇ ವೆಚ್ಚವನ್ನ ಭರಿಸಬೇಕಾಗುತ್ತದೆ. ಆದರೂ ಸರಕಾರ ರಾಜ್ಯಕ್ಕೆ ಬರೋ ಇಂತಹ ಯಂತ್ರೋಪಕರಣಗಳಿಗೆ ನಿರ್ದಿಷ್ಟ ದರ ನಿಗದಿಪಡಿಸಿದ್ದಲ್ಲಿ ಎಲ್ಲಾ ಕೃಷಿಕರಿಗೂ ಹೆಚ್ಚು ಸುಲಭವಾಗಬಹುದು" ಅಂತಾ ಯುವ ಕೃಷಿಕ ನೌಫಲ್ ಕಲ್ಕರೆ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಒಟ್ಟಿನಲ್ಲಿ, ಒಂದೆಡೆ ಜನ ಕೃಷಿಯಿಂದ ವಿಮುಖರಾಗುತ್ತಿದ್ದರೆ, ಇನ್ನೊಂದೆಡೆ ಕಟಾವು- ಉಳುಮೆಗೆಂದು ಬರೋ ಮೆಷಿನ್ ಗಳ ದರವೂ ಹೆಚ್ಚಾಗಿದೆ ಅನ್ನೋ ಮಾತಿದೆ.‌ ಆದ್ದರಿಂದ ಸರಕಾರವೇ ಇದೆಲ್ಲಕ್ಕೂ ಒಂದು ನಿರ್ದಿಷ್ಟ ನಿಯಮ ಜಾರಿಗೆ ತರಬೇಕೆನ್ನುವುದು ಕರಾವಳಿ ಭಾಗದ ಕೃಷಿಕರ ಒತ್ತಾಯ.

Edited By : Manjunath H D
Kshetra Samachara

Kshetra Samachara

28/11/2020 08:45 am

Cinque Terre

14.99 K

Cinque Terre

0

ಸಂಬಂಧಿತ ಸುದ್ದಿ