ಮಂಗಳೂರು: ರಸ್ತೆ ದಾಟುತ್ತಿದ್ದ ಮಕ್ಕಳಿಬ್ಬರಿಗೆ ಬೈಕ್ ಡಿಕ್ಕಿಯಾದ ಘಟನೆ ನಗರದ ಕೂಳೂರು ಸಮೀಪದ ಪಂಜಿಮೊಗರಿನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಮಕ್ಕಳು ರಸ್ತೆಗೆಸೆಯಲ್ಪಟ್ಟಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಈ ಮಕ್ಕಳಿಬ್ಬರು ಶಾಂತಿನಗರ ನಿವಾಸಿಗಳೆಂದು ತಿಳಿದು ಬಂದಿದೆ. ಇವರು ಪಂಜಿಮೊಗರಿನಲ್ಲಿ ರಸ್ತೆ ದಾಟಲೆಂದು ನಿಂತಿದ್ದರು. ಬಸ್ ಒಂದು ನಿಲ್ದಾಣದಲ್ಲಿ ನಿಂತಿದ್ದು ಅದು ಹೊರಟ ತಕ್ಷಣ ಮಕ್ಕಳು ರಸ್ತೆ ದಾಟಿದ್ದಾರೆ. ಇನ್ನೇನು ರಸ್ತೆಯ ಅಂಚಿಗೆ ತಲುಪಬೇಕನ್ನುವಷ್ಟರಲ್ಲಿ ಬೈಕ್ ಒಂದು ಬಂದು ಡಿಕ್ಕಿ ಹೊಡೆದಿದೆ.
ಪರಿಣಾಮ ಇಬ್ಬರು ರಸ್ತೆಗೆ ಬಿದ್ದಿದ್ದಾರೆ. ಓರ್ವ ಬಾಲಕ ತಕ್ಷಣ ಮೇಲೆದ್ದೆರೂ, ಮತ್ತೋರ್ವನನ್ನು ಅನತಿ ದೂರ ಬೈಕ್ ಎಳೆದೊಯ್ದಿದೆ. ಅಪಘಾತದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ತಕ್ಷಣ ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/07/2022 07:57 pm