ಉಳ್ಳಾಲ: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಳೆದ ಆರು ತಿಂಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.
ಕೊಲ್ಯ ಸಾರಸ್ವತ ಕಾಲನಿ ನಿವಾಸಿಗಳಾದ ದಯಾನಂದ ಮತ್ತು ತುಳಸಿ ದಂಪತಿಯ ದ್ವಿತೀಯ ಪುತ್ರಿ ಪಲ್ಲವಿ (25) ಮೃತ ಯುವತಿ. ಕಳೆದ ವರ್ಷ ಡಿ 2 ರಂದು ಕೆಲಸ ಮುಗಿಸಿ ಮಂಗಳೂರಿನಿಂದ ಮನೆಗೆ ವಾಪಾಸ್ಸಾಗುತ್ತಿದ್ದಾಗ ಕೊಲ್ಯ ಸಮೀಪ ರಾ.ಹೆ. 66 ರಲ್ಲಿ ರಸ್ತೆ ದಾಟುವ ಸಂದರ್ಭ ಮೊಬೈಲ್ ಕೈಯಿಂದ ಕೆಳಗೆ ಬಿದ್ದದ್ದನ್ನು ಹೆಕ್ಕಲು ಮುಂದಾದಾಗ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿತ್ತು.
ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕುಂಪಲ ಆಶ್ರಯ ಕಾಲನಿ ನಿವಾಸಿ ವಿಜೇಶ್(31) ಆಸ್ಪತ್ರೆಗೆ ದಾಖಲಾಗಿ ಡಿಸೆಂಬರ್ 22 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಪಲ್ಲವಿ ಅವರನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಆರು ತಿಂಗಳು ಕಳೆದರೂ ಆರೋಗ್ಯ ಸ್ಥಿತಿ ಸುಧಾರಿಸದೆ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪಲ್ಲವಿ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
Kshetra Samachara
25/06/2022 08:49 pm