ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ ಮಣ್ಣಗುಂಡಿ ಎಂಬಲ್ಲಿ ಸರಣಿ ಅಪಘಾತ ನಡೆದು ಇಬ್ಬರು ಗಾಯಗೊಂಡ ಘಟನೆ ಮೇ 27 ರ ಸಂಜೆ ನಡೆದಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಗಾಯಗೊಂಡ ಇಬ್ಬರ ಸ್ಥಿತಿಯು ಚಿಂತಾಜನಕವಾಗಿದೆ ಎನ್ನಲಾಗಿದೆ. ಟಿಪ್ಪರ್ ಲಾರಿ , ಈಕೋ ಕಾರು ಹಾಗೂ ಲಾರಿಗಳ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಈಕೋ ಕಾರು ಸಂಪೂರ್ಣ ನುಜ್ಜುಗುಜ್ಜಾಗಿ ರಸ್ತೆ ಬದಿಯಲ್ಲಿ ಬಿದ್ದುಕೊಂಡಿದೆ. ಮಂಗಳೂರಿನ ಬಂಟ್ವಾಳದಿಂದ ನೆಲ್ಯಾಡಿ ಸಮೀಪದ ಅಡ್ಡಹೊಳೆಯವರೆಗಿನ ಚತುಷ್ಪಥ ರಸ್ತೆ ಕಾಮಾಗಾರಿ ಪ್ರಗತಿಯಲ್ಲಿದ್ದು,ಅಲ್ಲಲ್ಲಿ ರಸ್ತೆ ಅಗೆದು ಹಾಕಲಾಗಿದ್ದು,ಇದರ ಮಧ್ಯೆಯು ಅಪಘಾತಕ್ಕೆ ಒಳಗಾದ ಮೂರು ವಾಹನಗಳ ಪೈಕಿ ಎರಡು ವಾಹನಗಳನ್ನು ಅತಿ ವೇಗದಿಂದ ಚಲಾಯಿಸಲಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈಕೋ ಕಾರು ನೆಲ್ಯಾಡಿ ಕಡೆಯಿಂದ ಶಿರಾಡಿ ಕಡೆಗೆ ತೆರಳುತಿತ್ತು ಮತ್ತು ಟಿಪ್ಪರ್ ಅದರ ವಿರುದ್ಧ ದಿಕ್ಕಿನಿಂದ ಬರುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಕೋ ಕಾರು ಚಾಲಕನು ಲಾರಿಯನ್ನು ಓವರ್ ಟೇಕ್ ಮಾಡಲು ಯತ್ನಿಸಿದಾಗ ಎದುರಿನಿಂದ ಅತಿವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ ಎನ್ನುವುದು ಸ್ಥಳೀಯರು ನೀಡಿದ ಮಾಹಿತಿ.
ಡಿಕ್ಕಿ ಹೊಡೆಯುವ ಸನ್ನಿವೇಶ ಎದುರಾಗುತ್ತಲೇ ಟಿಪ್ಪರ್ ಚಾಲಕ ಬ್ರೇಕ್ ಹಾಕಿದ್ದು ಇದರ ಗುರುತು ರಸ್ತೆಯಲ್ಲಿ ಮೂಡಿದೆ ಹಾಗೂ ಈಕೋ ಕಾರಿಗೆ ಢಿಕ್ಕಿ ಹೊಡೆದ ಟಿಪ್ಪರ್ ಪಕ್ಕದ ಲಾರಿಗೂ ಢಿಕ್ಕಿ ಹೊಡೆದಿದೆ. ಬ್ರೇಕ್ ಹಾಕಿದ ತೀವ್ರತೆಗೆ ಟಿಪ್ಪರ್ ವಿರುದ್ದ ದಿಕ್ಕಿಗೆ ಮುಖ ಮಾಡಿ ನಿಂತಿದೆ. ಗಾಯಾಳುಗಳನ್ನು ತುರ್ತು ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ನೆಲ್ಯಾಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Kshetra Samachara
27/05/2022 08:39 pm