ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಜಂಕ್ಷನ್ ಬಳಿ ಕಾರಿಗೆ ಡಿಕ್ಕಿಯಾಗಿ ಮಿನಿ ಟಿಪ್ಪರ್ ಪಲ್ಟಿಯಾಗಿದ್ದು ಟಿಪ್ಪರ್ ಚಾಲಕ ಪವಾಡಸದೃಶ ಪಾರಾಗಿದ್ದಾನೆ.
ಕಾರ್ಕಳದ ಸಾಣೂರುನಿಂದ ಜಲ್ಲಿ ಹುಡಿ ಹೇರಿಕೊಂಡು ಬರುತ್ತಿದ್ದ ಟಿಪ್ಪರ್ ಮುಲ್ಕಿ ಸಮೀಪದ ಬಪ್ಪನಾಡು ಜಂಕ್ಷನ್ ಬಳಿ ಮುಲ್ಕಿ ಒಳ ಪೇಟೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಕಾರಿನ ಜೊತೆ ಅಪಘಾತ ತಪ್ಪಿಸಲು ಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಹಿಂಬದಿಗೆ ಡಿಕ್ಕಿಯಾಗಿ ಟಿಪ್ಪರ್ ಪಲ್ಟಿಯಾಗಿದೆ.
ಅಪಘಾತದಿಂದ ಟಿಪ್ಪರ್‌ಗೆ ಹಾನಿಯಾಗಿದ್ದು ಕಾರಿನ ಹಿಂಬದಿ ಜಖಂಗೊಂಡಿದೆ. ಅಪಘಾತದಿಂದ ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕೂಡಲೇ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರೇನ್ ಮೂಲಕ ಟಿಪ್ಪರ್ ತೆರವುಗೊಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಪಘಾತ ವಲಯ ಮುಲ್ಕಿ ಜಂಕ್ಷನ್‌ಗಳಲ್ಲಿ ಅಪಘಾತ ತಡೆಗೆ ಕಳೆದ ಕೆಲ ತಿಂಗಳಿಂದ ಬ್ಯಾರಿಕೇಡ್ ಇರಿಸಿದ್ದು ಬುಧವಾರ ಏಕಾಏಕಿ ತೆರವುಗೊಳಿಸಲಾಗಿದ್ದು ಹೆದ್ದಾರಿಯಲ್ಲಿ ವಾಹನಗಳು ಅತಿವೇಗದಿಂದ ಚಲಿಸುತ್ತಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದು ಆಟೋ ಚಾಲಕ ವಿಲ್ಫ್ರೆಡ್ ಆರೋಪಿಸಿದ್ದಾರೆ. ಕೂಡಲೇ ಟ್ರಾಫಿಕ್ ಪೊಲೀಸರು ಬ್ಯಾರಿಕೇಡ್‌ಗಳನ್ನು ಇರಿಸಿ ಮುಂದೆ ನಡೆಯುವ ಅನಾಹುತಗಳನ್ನು ತಡೆಗಟ್ಟಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Kshetra Samachara
25/05/2022 08:58 pm