ಕಡಬ: ಚಲಿಸುತ್ತಿರುವಾಗಲೇ ಝೈಲೋ ಕಾರು ಬೆಂಕಿಗಾಹುತಿಯಾದ ಘಟನೆ ಕೊಂಬಾರು ಗ್ರಾಮದ ಪೆರುಂದೋಡಿ ಕಟ್ಟೆ ಎಂಬಲ್ಲಿ ಮೇ.14 ರ ರಾತ್ರಿ ನಡೆದಿದೆ.
ಪಟ್ರಮೆ ನಿವಾಸಿ ಆನಂದ ಗೌಡ ಎಂಬವರು ತಮ್ಮವರೊಂದಿಗೆ ಕಾರಿನಲ್ಲಿ ಸಂಬಂಧಿಕರಾದ ಕೊಂಬಾರು ಕಟ್ಟೆ ಸೊಮಪ್ಪ ಗೌಡರ ಮನೆಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ಕಾರಿನಲ್ಲಿ ಅಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಕಾರಿನ ಬಹುತೇಕ ಭಾಗಗಳು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿ ಇಬ್ಬರು ಗಂಡಸರು, ಓರ್ವ ಮಹಿಳೆ ಹಾಗೂ ಮಗು ಇದ್ದರು ಎಂದು ತಿಳಿದು ಬಂದಿದೆ.
ಕಾರು ಹೊತ್ತಿ ಉರಿಯುತ್ತಿದ್ದಂತೆ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ದಳ ಆಗಮಿಸಿದ ವೇಳೆಗಾಗಲೇ ಕಾರಿನ ಬಹುತೇಕ ಭಾಗಗಳು ಸಂಪೂರ್ಣ ಹೊತ್ತಿ ಉರಿದಿತ್ತು. ಕಾರಿನಲ್ಲಿದ್ದ ಓರ್ವರಿಗೆ ಸಣ್ಣ ಗಾಯವಾಗಿದ್ದು ಎಲ್ಲರೂ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಇಕ್ಕಟ್ಟಿನ ರಸ್ತೆ ಮತ್ತು ಅಗಲ ಕಿರಿದಾದ ಸೇತುವೆಯ ಮೂಲಕ ಅಗ್ನಿಶಾಮಕ ವಾಹನ ತಲುಪುವಾಗ ವಿಳಂಬವಾಗಿತ್ತು. ಅಲ್ಲದೆ ದೂರದ ಪುತ್ತೂರಿನಿಂದ ಅಗ್ನಿಶಾಮಕ ದಳ ಆಗಮಿಸಬೇಕಾಗಿರುವುದರಿಂದ ಸಹಜವಾಗಿ ಸಮಯ ಮೀರುತ್ತದೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರವಾಗಿ ಕಡಬದಲ್ಲಿಯೇ ಅಗ್ನಿ ಶಾಮಕ ದಳ ಸ್ಥಾಪನೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
Kshetra Samachara
15/05/2022 06:49 pm