ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕಾರ್ನಾಡು ಬೈಪಾಸ್ ಬಳಿ ಸರಣಿ ಅಪಘಾತ ನಡೆದಿದ್ದು ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ಸ್ಕೂಟರ್ ಸವಾರನನ್ನು ನಿಡ್ಡೋಡಿ ಮುಚ್ಚೂರು ಬಳಿಯ ನಿವಾಸಿ ಮೋಹನ್ ಗೌಡ (50) ಎಂದು ಗುರುತಿಸಲಾಗಿದ್ದು ಸಹಸವಾರ ಬಾಲಕ ಚರಣರಾಜ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಈಕೋ ಕಾರು ಕಾರ್ನಾಡ್ ಬೈಪಾಸ್ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಏಕಾಏಕಿ ಚಿತ್ರಾಪು ಒಳ ರಸ್ತೆಯಿಂದ ಕಾರ್ನಾಡು ಒಳಪೇಟೆ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಈ ಸಂದರ್ಭ ಈಕೋ ವಾಹನದ ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದ್ದರೂ ಫಲಕಾರಿಯಾಗದೆ ಸ್ಕೂಟರ್ ಗೆ ಡಿಕ್ಕಿ ಹೊಡೆದು ಬಳಿಕ ಹೆದ್ದಾರಿ ಬದಿ ನಿಲ್ಲಿಸಿದ ನವಯುಗ ಕಂಪನಿಯ ಹೈವೇ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಸರಣಿ ಅಪಘಾತ ಸಂಭವಿಸಿದೆ.
ಏಕಾಏಕಿ ನಡೆದ ಅಪಘಾತದಿಂದ ಭೀಕರ ಸದ್ದು ಉಂಟಾಗಿದ್ದು ಹೈವೇ ಪೆಟ್ರೋಲ್ ಕಾರಿನಲ್ಲಿ ಕುಳಿತಿದ್ದ ನಾಲ್ವರು ಸಿಬ್ಬಂದಿ ಪವಾಡ ಸದೃಶ ಪಾರಾಗಿದ್ದಾರೆ.
ಅಪಘಾತ ನಡೆದ ಸ್ಥಳದಲ್ಲಿ ಬೆಳಿಗ್ಗೆ ಮಹಿಂದ್ರಾ ಕಾರಿಗೆ ದ್ವಿಚಕ್ರ ವಾಹನವೊಂದು ಅಡ್ಡ ಬಂದು ಹೆದ್ದಾರಿ ಬದಿಯ ಚರಂಡಿಗೆ ಇಳಿದಿದ್ದು ಚಾಲಕ ವಿಜಯ್ ಹಳೆಯಂಗಡಿ ಅಪಾಯದಿಂದ ಪಾರಾದ ಘಟನೆಯೂ ನಡೆದಿದೆ.
Kshetra Samachara
09/05/2022 06:35 pm