ಮಂಗಳೂರು: ಅತಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರೊಂದು ಡಿವೈಡರ್ ಕ್ರಾಸ್ ಆಗಿ ಮತ್ತೊಂದು ಬದಿ ಸಂಚರಿಸುತ್ತಿದ್ದ 2 ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ನಗರದ ಬಳ್ಳಾಲ್ ಭಾಗ್ ನಲ್ಲಿ ಇಂದು ಮಧ್ಯಾಹ್ನ 1.20ರ ಸುಮಾರಿಗೆ ಸಂಭವಿಸಿದೆ.
ಮಣ್ಣಗುಡ್ಡ ನಿವಾಸಿ ಇಂಟೀರಿಯರ್ ಡೆಕೊರೇಟರ್ ಶ್ರವಣ್ ಕುಮಾರ್ ಎಂಬಾತ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ನಿಯಂತ್ರಣ ತಪ್ಪಿ ಡಿವೈಡರ್ ಏರಿದೆ. ಬಳಿಕ ಮತ್ತೊಂದೆಡೆ ಬರುತ್ತಿದ್ದ 2 ದ್ವಿಚಕ್ರ ವಾಹನ ಹಾಗೂ 2 ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ಸವಾರೆ ಪ್ರೀತಿ ಮನೋಜ್(47) ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಮತ್ತೊಂದು ಕಾರಿನಲ್ಲಿದ್ದ 7 ವರ್ಷದ ಬಾಲಕ ಅಮಯ್ ಜಯದೇವನ್ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲಿ ತಕ್ಷಣ ಜನ ಜಮಾಯಿಸಿ, ಬಿಎಂಡಬ್ಲ್ಯು ಕಾರು ಚಾಲಕ ಶ್ರವಣ್ ಕುಮಾರ್ ನನ್ನು ಕಾರಿನಿಂದ ಎಳೆದು ಹಾಕಿ ಥಳಿಸಿದ್ದಾರೆ. ಅಪಘಾತ ನಡೆದ ಭೀಕರ ದೃಶ್ಯ ಹಾಗೂ ಜನರು ಚಾಲಕನನ್ನು ಥಳಿಸುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆತ ಪಾನಮತ್ತನಾಗಿ ಕಾರು ಚಲಾಯಿಸಿದ್ದನೆಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/04/2022 07:05 pm