ಮಂಗಳೂರು: ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆಯಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗೆ ಗ್ಯಾಸ್ ತುಂಬಿಸಿಕೊಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಉಳ್ಳಾಲ ಪೊಲೀಸರು 1.92 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
ಚೆಂಬುಗುಡ್ಡೆ ನಿವಾಸಿ ಫ್ರಾನ್ಸಿಸ್ ಅಕ್ರಮವಾಗಿ ಗ್ಯಾಸ್ ತುಂಬಿಸಿ ಕೊಡುತ್ತಿದ್ದ ಆರೋಪಿ. ಇದೀಗ ಆರೋಪಿ ಪರಾರಿಯಾಗಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿ ಫ್ರಾನ್ಸಿಸ್ ತನ್ನ ಮನೆಗೆ ಹೊಂದಿಕೊಂಡಂತೆ ತಗಡು ಶೀಟ್ ಹಾಕಿ ಕೋಣೆ ನಿರ್ಮಿಸಿದ್ದ. ಅಲ್ಲಿ ಅಡುಗೆ ಅನಿಲ ಸಿಲಿಂಡರ್ ನಿಂದ ವಾಣಿಜ್ಯ ಬಳಕೆಯ ಖಾಲಿ ಸಿಲಿಂಡರ್ ಗಳಿಗೆ ಕೃತಕವಾಗಿ ರೆಗ್ಯೂಲೇಟರ್ ಬಳಸಿ ಗ್ಯಾಸ್ ತುಂಬಿಸಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿಯೊಂದಿಗೆ ಆಹಾರ ನಿರೀಕ್ಷಕರ ನೇತೃತ್ವದ ತಂಡದೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ.
ಈ ಸಂದರ್ಭ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಿಂದ ವಿವಿಧ ಕಂಪೆನಿಗಳಿಗೆ ಸೇರಿರುವ ಗ್ಯಾಸ್ ತುಂಬಿರುವ 15 ಸಿಲಿಂಡರ್, ಆಕ್ಸಿಜನ್ ತುಂಬಿರುವ ದೊಡ್ಡ ಸಿಲಿಂಡರ್, 112 ಖಾಲಿ ಗ್ಯಾಸ್ ಸಿಲಿಂಡರ್ ಸಹಿತ 1.92 ಲಕ್ಷ ಮೌಲ್ಯದ ಪರಿಕರಗಳನ್ನು ಪೊಲೀಸರು ವಶಪಡಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/02/2022 03:34 pm