ಸುಳ್ಯ: ಶೌಚಾಲಯದ ಗೋಡೆ ದುರಸ್ತಿ ಮಾಡುತ್ತಿದ್ದ ವೇಳೆ ಗೋಡೆ ಕುಸಿದು ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟ ದಾರುಣ ಘಟನೆ ಸುಳ್ಯ ತಾಲೂಕಿನ ಎಣ್ಮೂರಿನಲ್ಲಿ ನಡೆದಿದೆ.
ಶೌಚಾಲಯದ ಹಳೆ ಗೋಡೆ ಕೆಡವುತ್ತಿದ್ದ ಸಮಯದಲ್ಲಿ ಮಣ್ಣಿನ ಇಟ್ಟಿಗೆಯ ಗೋಡೆ ಮೈಮೇಲೆ ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಎಣ್ಣೂರು ಗ್ರಾಮದ ನರ್ಲಡ್ಕದ ನಿವಾಸಿ ಹರೀಶ ನಾಯ್ಕ್ ಎಂಬವರ ಮನೆಯ ಹಳೆ ಶೌಚಾಲಯದ ಗೋಡೆ ಕೆಡಹುವ ವೇಳೆ ಈ ದುರ್ಘಟನೆ ನಡೆದಿದೆ. ಹಳೆಯ ಟಾಯ್ಲೆಟ್ ಗೋಡೆ ತೆಗೆದು, ಹೊಸ ಕಟ್ಟಡ ಕಟ್ಟುವುದಕ್ಕಾಗಿ ಕೆಲಸ ಮಾಡಲಾಗುತ್ತಿತ್ತು. ಇತರ ಕೆಲಸಗಾರರ ಜತೆ ಸಮೀಪದ ಮನೆಯ ಬೀಪಾತುಮ್ಮ (60) ಹಾಗೂ ನೆಬಿಸಾ (45) ಎಂಬವರು ಕೆಲಸದಲ್ಲಿ ತೊಡಗಿದ್ದರು. ಆ ವೇಳೆ ಮಣ್ಣಿನ ಇಟ್ಟಿಗೆಯ ಗೋಡೆ ಇವರ ಮೇಲೆಯೇ ಕುಸಿದು ಬಿದ್ದಿದೆ. ತಕ್ಷಣ ಅಲ್ಲಿದ್ದವರು ಮಣ್ಣಿನ ರಾಶಿಯಿಂದ ಹೊರ ತೆಗೆದು ತೀವ್ರ ಗಾಯಗೊಂಡಿದ್ದ ಇವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಿದರು.
ಆದರೆ, ಕಾಣಿಯೂರು ತಲುಪುವಾಗ ಬೀಪಾತುಮ್ಮ ಕೊನೆಯುಸಿರೆಳೆದರು.
ನೆಬಿಸಾ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಸ್ಪತ್ರೆ ತಲುಪುವ ವೇಳೆ ಅವರೂ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿ ಧಾವಿಸಿ, ಮಾಹಿತಿ ಪಡೆದರು. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/12/2021 12:58 pm