ಮುಲ್ಕಿ: ರಾ.ಹೆ. 66ರ ಮುಲ್ಕಿ ಸಮೀಪದ ಕೊಲ್ನಾಡು ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು, ಹೆದ್ದಾರಿ ಬದಿ ಹೊಂಡಕ್ಕೆ ಬಿದ್ದು ಚಾಲಕ ಪವಾಡಸದೃಶ ಪಾರಾಗಿದ್ದಾರೆ.
ಬಿ.ಸಿ. ರೋಡಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕ ಬಂಟ್ವಾಳ ನಿವಾಸಿ ಮೊಹಮ್ಮದ್ ಮರ್ಜುಕ್ ಮುಲ್ಕಿ ಸಮೀಪದ ಕೊಲ್ನಾಡು ತಲುಪುತ್ತಿದ್ದಂತೆಯೇ ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿತು.
ಅಪಘಾತ ನಡೆದ ಸ್ಥಳದಲ್ಲಿ ಕೆಲ ತಿಂಗಳಿನಿಂದ ಅದಾನಿ ಗ್ಯಾಸ್ ಪೈಪ್ ಲೈನ್ ಕಾಮಗಾರಿಗೆಂದು ಭಾರಿ ಗಾತ್ರದ ಕಬ್ಬಿಣದ ಪೈಪುಗಳು ಬಿದ್ದಿದ್ದು, ಕಾರು ಕಬ್ಬಿಣದ ಪೈಪ್ ಗೆ ಡಿಕ್ಕಿ ಹೊಡೆಯದೆ ಬದಿಯಲ್ಲಿಯೇ ಸಾಗಿ ಬಿದ್ದಿದ್ದರಿಂದ ದೊಡ್ಡ ಅಪಾಯವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆಲ ಕುತೂಹಲಿಗರು ಹೊಂಡದಲ್ಲಿದ್ದ ಕಾರು ನೋಡಲು ವಾಹನ ನಿಲ್ಲಿಸಿದ್ದರಿಂದ ಹೆದ್ದಾರಿ ವಾಹನ ಸಂಚಾರ ಕೆಲ ಹೊತ್ತು ಅಸ್ತವ್ಯಸ್ತಗೊಂಡಿತು.
Kshetra Samachara
11/11/2021 05:30 pm