ಕಡಬ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬಿಟ್ಟು, ಪೊದೆಗೆ ನುಗ್ಗಿದ ಪರಿಣಾಮ ಮಗು ಸಹಿತ ಐವರು ಗಾಯಗೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪ ಬೆಳಂದೂರಿನಲ್ಲಿ ಇಂದು ಮಧ್ಯಾಹ್ನ ನಡೆದಿದ್ದು,
ಗಾಯಾಳುಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹತ್ತಿರದ ಸಂಬಂಧಿಕರು ಎಂದು ಗುರುತಿಸಲಾಗಿದೆ.
ಬೆಂಗಳೂರು ಮೂಲದ ಈ ಯಾತ್ರಿಕರು ಸುಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ, ಬಳಿಕ ಪುತ್ತೂರಿನಲ್ಲಿರುವ ಸಂಬಂಧಿಕರನ್ನು ಕಾಣಲು ಬರುತ್ತಿರುವಾಗ ಘಟನೆ ನಡೆದಿದೆ.
ಒಟ್ಟು 5 ಮಂದಿ ಕಾರಿನಲ್ಲಿದ್ದು, ಅವರು ಬೆಂಗಳೂರಿನ ಜೆ.ಪಿ. ನಗರ ನಿವಾಸಿಗಳು. ಓರ್ವ ಮಹಿಳೆ, ಒಂದು ಮಗು, ಒಬ್ಬರು ವೃದ್ಧ ಹಾಗೂ ಇಬ್ಬರು ಪುರುಷರು ಪ್ರಯಾಣಿಸುತ್ತಿದ್ದರು. ಇವರ ಪೈಕಿ ಇಬ್ಬರ ಹೆಸರು ನಿರಂಜನ ಹಾಗೂ ರವಿರಾಮ ಎಂದು ತಿಳಿದು ಬಂದಿದೆ. ಅಪಘಾತದಿಂದ ಐವರಿಗೂ ಗಾಯಗಳಾಗಿದ್ದು, ಅವರಲ್ಲಿ ವೃದ್ಧರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಪುತ್ತೂರಿನ ಪ್ರಗತಿ ಆಸ್ಪತ್ರೆ ಹಾಗೂ ಚೇತನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Kshetra Samachara
15/10/2021 02:52 pm