ನೆಲ್ಯಾಡಿ: ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಗ್ಯಾಸ್ ಸೋರಿಕೆಯಾಗದ ಹಿನ್ನೆಲೆಯಲ್ಲಿ ಭಾರಿ ದೊಡ್ಡ ದುರಂತವೊಂದು ತಪ್ಪಿದೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಹಾಗೂ ಕೋಲಾರದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿ ಡೀಸೆಲ್ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಹೊಸಮಜಲು ಮಸೀದಿಯ ಸಮೀಪದಲ್ಲಿ ಬೆಳಗ್ಗಿನ ಜಾವ ಸುಮಾರು 5:30ರ ಸಮಯದಲ್ಲಿ ಪರಸ್ಪರ ಡಿಕ್ಕಿಯಾಗಿದೆ.
ಡೀಸೆಲ್ ಟ್ಯಾಂಕರ್ ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದಾಗಿ ಘಟನಾ ಸ್ಥಳದಿಂದ ಮಾಹಿತಿ ಲಭ್ಯವಾಗಿದೆ. ಗ್ಯಾಸ್ ಟ್ಯಾಂಕರ್ ಚಾಲಕ ಕೂಡಲೇ ಸಂಭವನೀಯ ಅಪಾಯವನ್ನು ಅರಿತುಕೊಂಡು ರಸ್ತೆಯ ಬದಿಗೆ ಚಲಿಸಿರುವುದರಿಂದ ದೊಡ್ಡ ಪ್ರಮಾಣದ ದುರಂತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕರಿಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ನೆಲ್ಯಾಡಿ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಪಘಾತ ನಡೆದ ಸ್ಥಳದ ಪಕ್ಕದಲ್ಲಿ ಖಾಸಗಿ ಆಸ್ಪತ್ರೆ, ಮಸೀದಿ ಸೇರಿದಂತೆ ಜನಸಂದಣಿಯ ಗ್ರಾಮ ಪ್ರದೇಶವಾಗಿದ್ದು, ತಮ್ಮೂರಿನಲ್ಲಿ ದೊಡ್ಡ ದುರಂತವೊಂದು ತಪ್ಪಿದ ಬಗ್ಗೆ ಸ್ಥಳೀಯರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
Kshetra Samachara
27/02/2021 09:20 am