ಮುಲ್ಕಿ: ರಾ.ಹೆ. 66ರ ಮುಲ್ಕಿ ಸಮೀಪದ ಬಪ್ಪನಾಡು ದೇವಸ್ಥಾನದ ಎದುರು ಮಂಗಳವಾರ ಬೆಳಗ್ಗೆ ಐದು ಗಂಟೆ ಸುಮಾರಿಗೆ ಕೆಎಸ್ ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ಚರಂಡಿಗೆ ಸರಿದಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಬಳ್ಳಾರಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ನಾನ್ ಎ.ಸಿ. ಸ್ಲೀಪರ್ ಬಸ್ ಬಪ್ಪನಾಡು ತಲುಪುತ್ತಿದ್ದಂತೆಯೇ ಹೆದ್ದಾರಿಯಲ್ಲಿ ಅಚಾನಕ್ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ಚರಂಡಿಗೆ ಸರಿಯಿತು.
ಬಸ್ಸಿನ ಎದುರು ಬದಿಯ ಟಯರ್ ಚರಂಡಿಯ ಸಿಮೆಂಟಿನ ಮೋರಿಗೆ ಸಿಲುಕಿಕೊಂಡ ಕಾರಣ ಬಸ್ ಸುಮಾರು 10 ಅಡಿ ಆಳದ ಹೊಂಡಕ್ಕೆ ಬಿದ್ದರೂ ಭಾರಿ ದುರಂತ ತಪ್ಪಿದೆ. ಈ ಸಂದರ್ಭ ಚಾಲಕ ನಿರಂಜನ್, ನಿರ್ವಾಹಕ ಸಹಿತ 15 ಮಂದಿ ಪ್ರಯಾಣಿಕರು ಬಸ್ ನಲ್ಲಿದ್ದರು. ಬಳಿಕ ನವಯುಗ್ ಸಂಸ್ಥೆಯ ಸಿಬ್ಬಂದಿ ಮುಖಾಂತರ ಕ್ರೇನ್ ತರಿಸಿ ಬಸ್ಸನ್ನು ಮೇಲೆತ್ತಲಾಯಿತು.
ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು, ಮುಲ್ಕಿ ನಪಂ ಸದಸ್ಯ ಬಾಲಚಂದ್ರ ಕಾಮತ್ ಹಾಗೂ ಮುಲ್ಕಿ ರಿಕ್ಷಾ ಚಾಲಕರು ಬಸ್ ಮೇಲೆತ್ತಲು ಸಹಕರಿಸಿದರು.
Kshetra Samachara
02/02/2021 10:31 am