ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಶಾಖೆ ವತಿಯಿಂದ ಕರೆದ ತುರ್ತು ಸಭೆಯಲ್ಲಿ ತೀಸ್ತಾ ಸೆಟಲ್ವಾಡ್ ಬಂಧನವನ್ನು ತೀವ್ರವಾಗಿ ಖಂಡಿಸಲಾಯಿತು. ಭಾರತವು ಸರ್ವಾಧಿಕಾರಿ ಹಿಟ್ಲರ್ ಮಾದರಿಯ ಆಡಳಿತದತ್ತ ಸಾಗುತ್ತಿದೆ. ಅನ್ಯಾಯ, ದೌರ್ಜನ್ಯ, ದುರಾಡಳಿತದ ವಿರುದ್ಧ ಧ್ವನಿ ಎತ್ತಿದವರನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ ಎಂದು ಅವರು ಮುಖಂಡ ಸುಂದರ ಮಾಸ್ತರ್ ಹೇಳಿದ್ದಾರೆ.
ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಬಂಧನವು ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ. ಬಡವರ, ದಲಿತರ ಪರ ಹೋರಾಟ ಮಾಡುವ ಹೋರಾಟಗಾರರನ್ನೆಲ್ಲಾ ಪೊಲೀಸರೇ ಸುಳ್ಳು ಕೇಸು ದಾಖಲಿಸಿ ಅದಕ್ಕೆ ಬೇಕಾದ ಪುರಾವೆಗಳನ್ನು ತಾವೇ ಸೃಷ್ಠಿಸಿ ಎಲ್ಲಾ ಜನಪರ ಚಳವಳಿಗಾರರನ್ನು ಜೈಲಿಗೆ ಅಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಸಭೆಯಲ್ಲಿ ಬಂಧನ ಖಂಡಿಸಿ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧರಿಸ ಲಾಯಿತು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ ರಾಜ್ ಬಿರ್ತಿ, ಪರಮೇಶ್ವ ಉಳ್ಳೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಶ್ಯಾಮ ಸುಂದರ ತೆಕ್ಕಟ್ಟೆ, ಮಂಜುನಾಥ ಬಾಳುದ್ರು, ಶ್ರೀಧರ್ ಕುಂಜಿಬೆಟ್ಟು, ಪ್ರವೀಣ್ ಗುಂಡಿಬೈಲು, ಶಿವರಾಮ ಕಾಪು, ರಾಘವ ಬೆಳ್ಳಿ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
27/06/2022 07:08 pm