ಉಡುಪಿ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ನೌಕರ ವಿರೋಧಿ ಇಬ್ಬಗೆ ನೀತಿ ಧೋರಣೆಗಳಿಗೆ ಪ್ರಬಲ ಪ್ರತಿರೋಧ ಒಡ್ಡುವ ಸಲುವಾಗಿ ಅಂಚೆ ನೌಕರರ ಕೇಂದ್ರ ಸಂಘಗಳ, ರಾಜ್ಯ ಸಂಘಗಳ ಜಂಟಿ ಕ್ರಿಯಾ ಸಮಿತಿಯ ಕರೆಯನ್ವಯ ಮಾರ್ಚ್ 28 ಮತ್ತು 29 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದೆ. ಆದರಂತೆ ಉಡುಪಿ ವಿಭಾಗದಲ್ಲೂ ಸಮನ್ವಯ ತತ್ವದ ಸ್ಪಂದನಶೀಲ ನಾಯಕತ್ವದ ಜಂಟಿ ಕ್ರಿಯಾಸಮಿತಿಯ ಸೂರಿನಡಿಯಲ್ಲಿ ಐಕ್ಯತೆಯಿಂದ ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮುಷ್ಕರವನ್ನು ಯಶಸ್ವಿಗೊಳಿಸುವುದೆಂದು ನಿರ್ಣಯಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಲಯ ಮಟ್ಟದಲ್ಲಿ ಈಗಾಗಲೇ ಹಲವಾರು ಪ್ರತಿಭಟನಾ ಸರಣಿ ಕಾರ್ಯಕ್ರಮಗಳಿಗೆ ಪರಿಣಾಮಕಾರಿ ಚಾಲನೆ ನೀಡಲಾಗಿದೆ. ಕೇಂದ್ರ ಸರಕಾರದ ನೌಕರ ವಿರೋಧಿ ಧೋರಣೆಗಳಿಂದಾಗಿ ನಾವು ಮುಷ್ಕರದಲ್ಲಿ ಸಾಗರೋಪಾದಿಯಲ್ಲಿ ಧುಮುಕಬೇಕಾದ ಅನಿವಾರ್ಯತೆಯ ಸವಾಲು ತಂದೊಡ್ಡಿದೆ. ಒಂದೆಡೆ ನೂರಾರು ವರ್ಷಗಳ ಇತಿಹಾಸವಿರುವ ಸಾರ್ವಜನಿಕ ಇಲಾಖೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ಸರಕಾರಿ ಮಟ್ಟದಲ್ಲಿ ವೇಗ ಡೆದುಕೊಂಡರೆ, ಇನ್ನೊಂದಡೆ ನಮ್ಮ ಮಹಾನ್ ನಾಯಕರು ಹೋರಾಟದ ಮೂಲಕ ಗಳಿಸಿ ಬಳುವಳಿಯಾಗಿ ನೀಡಿರುವ ಸೌಲಭ್ಯಗಳ ಹಕ್ಕು ಬಾಧ್ಯತೆಗಳಿಗೆ ಕತ್ತರಿ ಪ್ರಯೋಗ, ಇತ್ತ ನಮ್ಮ ವೃತ್ತಿ ಬದುಕು ಅಡಕತ್ತರಿಯಲ್ಲಿ ನಲುಗಿಕೊಂಡಿದೆ. ನಮ್ಮ ಮುಂದಿರುವ ಯುವ ಪೀಳಿಗೆಯ ಭವಿಷ್ಯದ ಬಗ್ಗೆ ನಾವು ಗಂಭೀರವಾಗಿ ಯೋಚಿಸುವ ಕಾಲವಿದು. ಇಂತಹ ಕಠಿಣ ಸಂದರ್ಭದಲ್ಲಿ ನಾವು ಎಚ್ಚೆತ್ತುಕೊಂಡು ಪ್ರತಿಭಟನೆ ನಡೆಸಲಿದ್ದೇವೆ ಎಂದು ಅಂಚೆ ನೌಕರರ ಸಂಘದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
Kshetra Samachara
25/03/2022 01:01 pm