ಉಡುಪಿ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಅಲ್ಲದೇ 169 ಮತ್ತು 169ಎಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿರುವ ಎಲ್ಲಾ ರಸ್ತೆಗಳ ಮೂಲಭೂತ ಸಮಸ್ಯೆಗಳನ್ನು ಇನ್ನು 10 ದಿನಗಳ ಒಳಗೆ ಸಂಪೂರ್ಣವಾಗಿ ಬಗೆಹರಿಸಿ, ಈ ಕುರಿತ ಸಂಪೂರ್ಣ ವರದಿಯನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿತ ಸೂಚಿಸುವ ಯಾವುದೇ ಸಭೆಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೂ ಸಹ ಗೈರುಹಾಜರಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮತ್ತು ಇತರೆ ಕಾರ್ಯಗಳನ್ನು ಸುಗಮವಾಗಿ ಮಾಡಲು ಜಿಲ್ಲಾಡಳಿತದ ನೆರವು ಬೇಕಿದ್ದಲ್ಲಿ, ಜಿಲ್ಲಾಡಳಿತ ನೀಡುವ ಎಲ್ಲಾ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡುಬರುತ್ತಿರುವ ಎಲ್ಲಾ ಸಮಸ್ಯೆಗಳನ್ನು ಇನ್ನು 10 ದಿನದ ಒಳಗೆ ಸಂಪೂರ್ಣವಾಗಿ ಬಗೆಹರಿಸಿ, ಈ ಸಮಸ್ಯೆಗಳನ್ನು ಸರಿಪಡಿಸಿದ ದಿನಾಂಕ ಮತ್ತು ಸಮಯವನ್ನು ಒಳಗೊಂಡ ಛಾಯಾಚಿತ್ರಗಳು ಹಾಗೂ ವರದಿಯನ್ನು ಸಲ್ಲಿಸಬೇಕು. ಮುಂದಿನ ಸಭೆಗೆ ಹಾಗೂ ಜಿಲ್ಲಾಡಳಿತ ಸೂಚಿಸುವ ಎಲ್ಲಾ ಸಭೆಗಳಿಗೆ ಎನ್.ಎಚ್. ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ತೊಂದರೆ ಇರುವ ಕಡೆ ತಕ್ಷಣವೇ ಸರಿಪಡಿಸಬೇಕು. ತುರ್ತು ಅಗತ್ಯವಿರುವ ಕಡೆಗಳಲ್ಲಿ ತಕ್ಷಣವೇ ಬೀದಿದೀಪಗಳನ್ನು ಅಳವಡಿಸ ಬೇಕು. ಹೆದ್ದಾರಿ ಪಕ್ಕದಲ್ಲಿ ನೀರು ಹರಿಯಲು ಮತ್ತು ಸುಗಮ ಸಂಚಾರಕ್ಕೆ ತಡೆ ಉಂಟು ಮಾಡುವ ಗಿಡಗಳನ್ನು ಕೂಡಲೇ ತೆರವುಗೊಳಿಸಬೇಕು. ಪ್ರೈಓವರ್‌ಗಳ ಮೇಲೆ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
Kshetra Samachara
08/07/2022 09:35 pm