ಉಡುಪಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲಾ ಘಟಕವು ಜಿಪಂ ಸಿಇಓ ಪ್ರಸನ್ನ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು. 15 ದಿನಗಳೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಭಡ್ತಿ ನೀಡಲು ಕ್ರಮ ವಹಿಸಬೇಕು. ೨೦೦೬-೦೭ರಿಂದ ೨೦೧೧-೧೨ರವರೆಗೆ ಮನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಿರುವ ಪ್ರಕರಣವನ್ನು ವಾಪಾಸ್ ಪಡೆಯಬೇಕು. ಕಳೆದ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗ್ರೂಪ್ ಬಿಗೆ ಮೇಲ್ದರ್ಜೆಗೇರಿಸಬೇಕು. ಇಲಾಖೆಯಲ್ಲಿ ನಿರ್ವಹಿಸಿರುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೌನ್ಸಲಿಂಗ್ ಮೂಲಕ ವರ್ಗಾವಣೆ ಮಾಡುವ ನಿಯಮವನ್ನು ಕೂಡಲೇ ಜಾರಿಗೊಳಿಸಬೇಕು. ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಸೇವಾ ವಿಷಯಗಳನ್ನು ಸಕಾಲ ವ್ಯಾಪ್ತಿಗೆ ತರಬೇಕು. ಕೋವಿಡ್‌ನಿಂದ ಮೃತರಾದ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಟುಂಬಗಳಿಗೆ ಪರಿಹಾರ ಮತ್ತು ಅನುಕಂಪದ ನೌಕರಿ ನೀಡಬೇಕು ಮುಂತಾದ ಬೇಡಿಕೆಗಳನ್ನು ಸಂಘ ಮುಂದಿಟ್ಟಿದೆ.
Kshetra Samachara
27/05/2022 09:24 pm