ಉಡುಪಿ :ಜಿಲ್ಲೆಯಲ್ಲಿ ಇತ್ತೀಚೆಗೆ ಬಾಲ್ಯ ವಿವಾಹ ನಡೆಸಲು ಯತ್ನಿಸಿದವರು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಂದಾಪುರದ ತ್ರಾಸಿಯಲ್ಲಿ ಅಪ್ರಾಪ್ತ ಬಾಲಕಿಗೆ ದೇವಸ್ಥಾನದಲ್ಲಿ ವಿವಾಹ ಮಾಡುತ್ತಿರುವ ಕುರಿತಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಿ, ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಆದರೆ ಆ ವಿವಾಹ ಸಂದರ್ಭದಲ್ಲಿ ಹಾಜರಿದ್ದವರು ಹಾಗೂ ಸಹಕರಿಸದವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿಗಳು, ಈ ರೀತಿಯ ಕ್ರಮಗಳಿಂದ ಬಾಲ್ಯ ವಿವಾಹ ಮಾಡುವವರಿಗೆ ಕಾನೂನು ಉಲ್ಲಂಘನೆಯ ಪರಿಣಾಮ ತಿಳಿಯವುದಿಲ್ಲ. ಆದ್ದರಿಂದ ಅಂದು ವಿವಾಹದಲ್ಲಿ ಭಾಗವಹಿಸಿದ್ದವರು ಮತ್ತು ಸಹಕರಿಸಿದವರ ವಿರುದ್ದ ಪ್ರಕರಣ ದಾಖಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಜಿ.ಜಗದೀಶ್ ಸೂಚಿಸಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತಂತೆ ಜಿಲ್ಲೆಯ ಎಲ್ಲಾ ಕಲ್ಯಾಣ ಮಂಟಪ ಮಾಲೀಕರು, ದೇವಾಲಯಗಳ ಅರ್ಚಕರು, ಕ್ಯಾಟರ‍್ಸ್ಗಳಿಗೆ ಅರಿವು ಮೂಡಿಸುವ ಕಾರ್ಯಾಗಾರ ಏರ್ಪಡಿಸಿ, ವಲಸೆ ಕಾರ್ಮಿಕರಲ್ಲಿ ಬಾಲ್ಯ ವಿವಾಹಗಳು ಕಂಡು ಬರಲಿದ್ದು ಅಂತಹ ಪ್ರದೇಶಗಳ ಮೇಲೆ ನಿಗಾ ಇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಅಧಿಕಾರಿಗಳಿಗೆ ಹಾಗೂ 8, 9, 10 ನೇ ತರಗತಿಯ ವಿದ್ಯಾರ್ಥಿನಿಯರು 7 ದಿನಗಳಿಗಿಂತ ಹೆಚ್ಚು ಗೈರು ಹಾಜರಾದರೆ ಈ ಬಗ್ಗೆ ಪೋಷಕರನ್ನು ಸಂಪರ್ಕಿಸಿ ವಿವರ ಪಡೆಯುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಡಿಸಿ ತಿಳಿಸಿದರು.
Kshetra Samachara
07/02/2021 12:34 pm