ಕಾರ್ಕಳ : ಪುರಸಭೆ ವ್ಯಾಪ್ತಿಯ ಕಾರ್ಕಳ ಪೇಟೆ ರಸ್ತೆಯಲ್ಲಿ ಬೃಹತ್ ಗಾತ್ರದ ಮರಣ ಗುಂಡಿಗಳು ಸೃಷ್ಟಿಯಾಗಿ ವಾಹನ ಸವಾರರ ಬಲಿಗಾಗಿ ಬಾಯ್ದೆರೆದು ಕಾಯುತ್ತಿದೆ!
ಈ ಬಗ್ಗೆ ಸ್ಥಳೀಯ ಪುರಸಭೆ ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಕಳ ಹಾಗೂ ಬಂಡೀಮಠ ಸಂಪರ್ಕ ರಸ್ತೆಯ ಸಾಲ್ಮರ ರಸ್ತೆಯಲ್ಲಿ ಡಾಮರು ಕಿತ್ತುಹೋಗಿ ಸುಮಾರು 1 ಅಡಿ ಆಳ, ಬೃಹತ್ ಸುತ್ತಳತೆಯ ಗುಂಡಿ ಸೃಷ್ಟಿಯಾಗಿವೆ.
ಅತಿ ವೇಗವಾಗಿ ಸಾಗುವ ವಾಹನ ಸವಾರರು ರಸ್ತೆಯಲ್ಲಿನ ಗುಂಡಿಗಳು ಅರಿವಿಗೆ ಬಾರದೆ ಬಿದ್ದು ಗಾಯಗೊಂಡು, ಆಸ್ಪತ್ರೆ ಸೇರುವುದು ಇಲ್ಲಿ ಸರ್ವೇಸಾಮಾನ್ಯ.
ಇದಲ್ಲದೆ, ಕಾರ್ಕಳ ಸುನಿತಾ ಮೋಟಾರ್ಸ್ ಮುಂಭಾಗ ರಸ್ತೆಯಲ್ಲಿನ ಒಳಚರಂಡಿ ಮ್ಯಾನ್‌ಹೋಲ್ ಕಳಪೆ ಕಾಮಗಾರಿಯಿಂದಾಗಿ 3 ತಿಂಗಳಿನಿಂದ ಕುಸಿದಿದ್ದು, ದುರಸ್ತಿಗೊಳಿಸುವಂತೆ ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾನ್‌ಹೋಲ್‌ಗೆ ಕಬ್ಬಿಣದ ರಿಂಗ್ ಸೇರಿಸಿ ಬಳಿಕ ಮುಚ್ಚಳ ಅಳವಡಿಸಬೇಕು.
ಆದರೆ, ಅಧಿಕಾರಿಗಳು ಒಳಚರಂಡಿ ದುರಸ್ತಿ ಮಾಡುವಾಗ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಮ್ಯಾನ್‌ಹೋಲ್‌ಗೆ ರಿಂಗ್ ಹಾಕದೆ ಅದರ ಸುತ್ತ ಮಣ್ಣು ಹಾಕಿ ಬಳಿಕ ಮುಚ್ಚಳ ಅಳವಡಿಸಿದ್ದಾರೆ.
ಈ ಬಾರಿಯ ಮಳೆಗಾಲದಲ್ಲಿ ಮಣ್ಣು ಕುಸಿದ ಪರಿಣಾಮ ಮ್ಯಾನ್‌ಹೋಲ್ ಭಾಗದಲ್ಲಿ ರಸ್ತೆ ಕುಸಿದು ಮ್ಯಾನ್‌ಹೋಲ್‌ಗೆ ಅಳವಡಿಸಿದ್ದ ಮುಚ್ಚಳ ಕಿತ್ತುಹೋಗಿ ಮಣ್ಣು ಹಾಗೂ ಮುಚ್ಚಳ ಮ್ಯಾನ್‌ಹೋಲ್ ಒಳಗೆ ಕುಸಿದು ಬಿದ್ದಿದೆ.
ಇದರಿಂದಾಗಿ ವಾಹನ ಸವಾರರಿಗೆ ರಸ್ತೆಯಲ್ಲಿ ಬಾಯಿ ತೆರೆದ ಗುಂಡಿಗಳು ಗೋಚರಿಸದೆ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಯಿದೆ.
ಮುಖ್ಯವಾಗಿ ರಾತ್ರಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಇಂತಹ ಗುಂಡಿಗಳು ಮರಣಗುಂಡಿಗಳಾಗಿ ಕಾಡುತ್ತಿವೆ. ಆದ್ದರಿಂದ ಪುರಸಭೆ ಆಡಳಿತ ಕಣ್ಮುಚ್ಚಿ ಕೂರದೆ ತಕ್ಷಣ ಸ್ಪಂದಿಸಿ, ದುರಸ್ತಿಗೊಳಿಸಬೇಕಿದೆ.
Kshetra Samachara
03/01/2021 11:10 am