ಸಚಿವ ಸುನಿಲ್ ಕುಮಾರ್ ಅವರು ಕಾರ್ಕಳ ಆಮಂತ್ರಣ ನೀಡಲು ಮನೆಗೆ ಬಂದಿದ್ದರು. ನಾನು ಉತ್ಸವದಲ್ಲಿ ಭಾಗವಹಿಸಿದ್ದೇನೆ. ಆದರೆ, ಹೆಬ್ರಿ ಆಡಳಿತ ಸೌಧ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿಲ್ಲ. ಅದರಿಂದ ನನಗೆ ವೈಯಕ್ತಿಕವಾಗಿ ಏನೂ ನಷ್ಟವಿಲ್ಲ. ಇದು ಜನರ ಭಾವನೆ ಮೇಲೆ ಆಕ್ರಮಣ ಮಾಡಿದಂತಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾರ್ಕಳದಲ್ಲಿ ಮಾತನಾಡಿದ ಅವರು , ಸರಿಯಾದ ಅಧ್ಯಯನ ನಡೆಸದೇ ಎಣ್ಣೆಹೊಳೆಯಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. 108 ಕೋಟಿ ರೂ.ನೊಂದಿಗೆ ಇದೀಗ ಮತ್ತೆ 40 ಕೋಟಿ ರೂ. ವೆಚ್ಚದಲ್ಲಿ ಎಣ್ಣೆಹೊಳೆ ಹೊಳೆಗೆ ತಡೆಗೋಡೆ ನಿರ್ಮಾಣಕ್ಕಾಗಿ ಮಂಜೂರಾಗಿದೆ. ಎಣ್ಣೆಹೊಳೆ ಯೋಜನೆಯಿಂದ ಮುಂದಿನ ದಿನಗಳಲ್ಲಿ ಗ್ರಾಮಸ್ಥರಿಗೆ ನೆರೆಯುಂಟಾಗಿ, ತೊಂದರೆಯಾಗಲಿದೆ.
ಈ ಯೋಜನೆಯನ್ನು ಪಟ್ಟಿಬಾವು ಎಂಬಲ್ಲಿ ನಿರ್ಮಾಣ ಮಾಡುತ್ತಿದ್ದಲ್ಲಿ ಯಾವುದೇ ಅನಾಹುತ ಸಂಭವಿಸುತ್ತಿರಲಿಲ್ಲ. ಯೋಜನೆಯ ಹೆಚ್ಚುವರಿ ಹಣವು ಯಾವ ರೀತಿಯಲ್ಲಿ ಬಳಕೆಯಾಗಿದೆ ಎನ್ನುವುದು ತಿಳಿಯಬೇಕಿದೆ. ಅದು ಜಿಲ್ಲಾ ನ್ಯಾಯಾಧೀಶರ ಮಟ್ಟದಲ್ಲಿ ತನಿಖೆಯಾಗಬೇಕೆಂದು ವೀರಪ್ಪ ಮೊಯ್ಲಿ ಹೇಳಿದರು.
ನವ ಸಂಕಲ್ಪ ಶಿಬಿರ ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತೇವೆ. ಕರಾವಳಿಯ ಎರಡು ಜಿಲ್ಲೆಯಲ್ಲಿ ನಾನೇ ಸಂಚಾರ ಮಾಡಿ ಪಕ್ಷ ಬಲಪಡಿಸುವ ಕಾರ್ಯ ಮಾಡಲಿದ್ದೇನೆ. ಕಾರ್ಕಳಕ್ಕೆ ವಿಶೇಷ ಒತ್ತು ನೀಡಲಾಗುವುದು. ರಾಜ್ಯ ಹಾಗೂ ರಾಷ್ಟ್ರದೆಲ್ಲೆಡೆ ನವಸಂಕಲ್ಪ ಶಿಬಿರ ನಡೆಯಲಿದೆ ಎಂದು ಮೊಯ್ಲಿ ಹೇಳಿದರು.
Kshetra Samachara
13/06/2022 01:09 pm