ಉಡುಪಿ: ಮಗನ ಅಂತ್ಯಸಂಸ್ಕಾರ ನಡೆಸಲು ಹೆತ್ತವರಿಗೆ ಅಸಹಾಯಕತೆ ಎದುರಾದಾಗ, ಉಡುಪಿಯ ಸಹೃದಯಿ ಸಮಾಜಸೇವಕರು ಅಂತ್ಯಸಂಸ್ಕಾರ ನಡೆಸಲು ನೆರವಿಗೆ ಬಂದು, ಮಾನವೀಯತೆ ಮೆರೆದರು. ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ವಿಭಾಜಕದ ದಂಡೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ಯುವಕನನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.
ಅದಾಗಲೇ ಯುವಕ ಮೃತಪಟ್ಟಿರುವುದು ಧೃಡಪಟ್ಟಿತು. ಬಳಿಕ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿ ಇಡಲಾಗಿತ್ತು.
ಸಮಾಜಸೇವಕರು ಅಪರಿಚಿತ ಯುವಕನ ಸಂಬಂಧಿಕರನ್ನು ಹುಡುಕಾಡಲು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಬಿತ್ತರಿಸಿದ್ದರು. ಜಾಲತಾಣ ವರದಿಯಿಂದ ವಿಷಯ ತಿಳಿದು ಯುವಕನ ಹೆತ್ತವರಾದ ಕಾರ್ಕಳ ರಂಗನಪಲ್ಕೆ ಭೋಜ ಪೂಜಾರಿ- ಲೀಲಾ ಪೂಜಾರಿ ಅವರು, ಸಂಬಂಧಿಕರೊಂದಿಗೆ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಿ ಶವ ಕಂಡು ತಮ್ಮ ಮಗನದೆಂದು ಧೃಡೀಕರಿಸಿದರು.
ಕಾನೂನು ಪ್ರಕ್ರಿಯೆ ನಡೆದು, ಮಗನ ಶವ ಪಡೆದುಕೊಂಡಿರುವ ಹೆತ್ತವರಿಗೆ, ಅಂತ್ಯಸಂಸ್ಕಾರ ನಡೆಸಲು ಅಸಹಾಯಕ ಪರಿಸ್ಥಿತಿ ಎದುರಾಯಿತು. ತಕ್ಷಣ ಸ್ಪಂದಿಸಿದ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ನೆರವಾದರು. ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ ಆರ್ಥಿಕ ನೆರವು ನೀಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ರುದ್ರಭೂಮಿಗೆ ಶವ ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಿತು.
Kshetra Samachara
08/02/2021 11:54 am