ಉಡುಪಿ: ಉಡುಪಿ ಜಿಲ್ಲೆಯಲ್ಲಿ ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿ ತರಗತಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಸುರಕ್ಷಾ ಕ್ರಮ ತೆಗೆದುಕೊಂಡು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸರ್ಕಾರಿ/ಖಾಸಗಿ/ ಅನುದಾನಿತ/ಅನುದಾನ ರಹಿತ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮಾರ್ಗಸೂಚಿಯನ್ವಯ ಪ್ರಾರಂಭಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ತಮ್ಮ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರದೊಂದಿಗೆ ಕಾಲೇಜಿಗೆ ಹಾಜರಾಗಬಹುದು. ತರಗತಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಾಲೇಜು ಆರಂಭದ ಕನಿಷ್ಠ 3 ದಿನಗಳ ಮುಂಚೆ ಎಲ್ಲಾ ಅಧ್ಯಾಪಕರು, ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ 19 ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ಪಡೆದಿರಬೇಕು, ಕಾಲೇಜಿನ ಎಲ್ಲಾ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು, ಕಾಲೇಜುಗಳಲ್ಲಿ ಅಧ್ಯಾಪಕರು ಕಡ್ಡಾಯವಾಗಿ ಮಾಸ್ಕ್, ಫೇಸ್ ಶೀಲ್ಡ್ ಧರಿಸಬೇಕು, ಕಾಲೇಜುಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್ ಚಟುವಟಿಕೆ ಆರಂಭಿಸುವಂತಿಲ್ಲ. ಕೊಠಡಿಯಲ್ಲಿ ಸಾಮಾಜಿಕ ಅಂತರದಲ್ಲಿ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು, ಅವಶ್ಯವಿದ್ದಲ್ಲಿ ಹೆಚ್ಚುವರಿ ಕೊಠಡಿ ಬಳಕೆ ಮಾಡಿಕೊಳ್ಳಬೇಕು ಎಂದರು.
Kshetra Samachara
12/11/2020 10:28 pm