ಉಡುಪಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ ನೇಮಕವಾಗಿರುವ ಕಲ್ಲುಗದ್ದೆ ಅರುಣ್ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬಳಿಕ ಹಿಂದುಳಿದ ವರ್ಗಗಳ ಆಯೋಗ ರಾಜ್ಯಾಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದ್ದಾರೆ.
ಮಾನವ ಹಕ್ಕು ಹೋರಾಟಗಾರನಾಗಿ ಹಲವರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದೇನೆ. ಅಲ್ಲದೆ, ಪದವೀಧರರ ಹಕ್ಕುಗಳ ಹೋರಾಟಗಾರನಾಗಿಯೂ ಕಾರ್ಯ ನಿರ್ವಹಿಸಿರುತ್ತೇನೆ. ಇದೀಗ ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಸದಸ್ಯನನ್ನಾಗಿ ನೇಮಕ ಮಾಡಿದೆ ಎಂದು ತನಗೆ ಉನ್ನತ ಹುದ್ದೆ ನೀಡಿದ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಹಿಂದುಳಿದವರ ಸಮಸ್ಯೆಗೆ ಧ್ವನಿಯಾಗಿ ನೊಂದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾರ್ಗದರ್ಶನದಲ್ಲಿ ಹಿಂದುಳಿದವರ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂದರು.
ಹಿಂದುಳಿದ ವರ್ಗಕ್ಕೆ ಸೇರಿದ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿ, ಸಮಸ್ಯೆ ಬಗ್ಗೆ ಸರ್ವೆ ಮಾಡಲಾಗುವುದು. ಹಿಂದುಳಿದ ವರ್ಗಗಳಿಗಾಗಿ ಇರುವ ಅನೇಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ಮಾಡುವ ಕಾರ್ಯ ಸಮರ್ಥವಾಗಿ ನಡೆಸುತ್ತೇನೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.
Kshetra Samachara
02/12/2020 03:15 pm