ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪ.ಪೂ. ಕಾಲೇಜಿನಲ್ಲಿ `ಹಸಿರೊಡನೆ ಕಲಿಕೆಯ ಕಲರವ' ಕಾರ್ಯಕ್ರಮ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜರುಗಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹರಿಶ್ಚಂದ್ರ ಕುಲಾಲ್, ಇಂದು ನಾವು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಗಮನಿಸುತ್ತಿದ್ದೇವೆ. ಆದರೆ ನಮಗೆ ಅನ್ನ ನೀಡುವ ಕೃಷಿ ಭೂಮಿ ಮತ್ತು ಕೃಷಿಕರ ಕುರಿತು ತಿಳುವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಮಾತನಾಡಿ, ಜಗತ್ತಿನಲ್ಲಿ ಹಿಂದೆ ಎಲ್ಲರೂ ದೀರ್ಘಾಯುಷಿಗಳಾಗಿದ್ದರು. ಸಾವಯವ ಕೃಷಿಯನ್ನು ಉತ್ತೇಜಿಸಿದರೆ ನಮ್ಮ ಮಣ್ಣಿನ ಸಂಸ್ಕೃತಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಸ್ಥಳೀಯ ರಮಣಿ ಕಾಂಪೌಂಡ್ ನಿವಾಸಿ ರಾಜು ಶೆಟ್ಟಿಯವರನ್ನು ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸುರೇಶ್ ಆನಂದ್ ರಾವ್, ಸುನಿಲ್ ಶೆಟ್ಟಿ, ರಾಕೇಶ್ ಇವರನ್ನು ಗೌರವಿಸಲಾಯಿತು.
ಕ್ರಿಯೇಟಿವ್‌ನ ಸಹ ಸಂಸ್ಥಾಪಕರಾದ ಅಮೃತ್ ರೈ, ಪ್ರವೀಣ್ ಕುಮಾರ್ ಹಿರ್ಗಾನ, ಉಪನ್ಯಾಸಕರಾದ ರಾಘವೇಂದ್ರ ರಾವ್, ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಕೃಷಿ ಭೂಮಿಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಸಮಾರೋಪ ಸಮಾರಂಭವು ಮಧ್ಯಾಹ್ನ 3.30 ಕ್ಕೆ ನೆರವೇರಿತು. ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಸಿ.ಪಿ ಹರಿಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಆಗಮಿಸಿ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿದರು. ಸಂಸ್ಥೆಯ ಸಂಸ್ಥಾಪಕರುಗಳಾದ ಅಶ್ವಥ್ ಎಸ್.ಎಲ್, ಆದರ್ಶ ಎಂ. ಕೆ, ಉಪನ್ಯಾಸಕ ವರ್ಗದವರು ಹಾಗೂ ಉಪನ್ಯಾಸಕೇತರ ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿನಾಯಕ್ ಜೋಗ್ ಹಾಗೂ ಶಿವಕುಮಾರ್, ರಾಜೇಶ್, ನವೀನ್, ರವಿರಾಜ್ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Kshetra Samachara
19/09/2022 08:10 pm