ಕುಂದಾಪುರ: ವಿದ್ಯಾರ್ಥಿಗಳು ಪೆನ್ಸಿಲ್ ಮೇಲಿನ ತಿರುಳನ್ನು ಕತ್ತರಿಸಿದ ಹಾಗೆ ಒಳಗಿನ ಗ್ರಾಪೈಟ್ ಮೊನೆ ಚೂಪಾಗಿ, ಹದವಾಗುತ್ತ ಅದರ ಬರವಣಿಗೆ ಇನ್ನಷ್ಟು ಅಂದವಾಗುವುದೋ , ಅದೇ ರೀತಿ ಕಷ್ಟಗಳನ್ನು ಎದುರಿಸಿ ಎದೆಗುಂದದೆ ಛಲದಿಂದ ಮುಂದುವರಿದಾಗ ಗೆಲುವು ನಮ್ಮದಾಗುತ್ತದೆ. ಜೊತೆಗೆ ಇಂತಹ ಗೆಲುವು ಸಾಧಿಸಬೇಕಾದರೆ ನಮ್ಮಲ್ಲಿ ಗುರಿ ಇಟ್ಟುಕೊಂಡು ಮುಂದೆ ಸಾಗುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಮೌಸ್ ಮತ್ತು ಕೀಲಿಮಣೆ ಇಲ್ಲದ ಕಂಪ್ಯೂಟರ್ ನಂತೆ ಆಗುತ್ತದೆ ಎಂದು ಖ್ಯಾತ ಸಂಪನ್ಮೂಲ ವ್ಯಕ್ತಿ ಶಿರಿಯಾರ ಗಣೇಶ್ ನಾಯಕ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಶಾಸಕರಾದ ಬಿ.ಎಮ್. ಸುಕುಮಾರ್ ಶೆಟ್ಟಿ ನೇತೃತ್ವದ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್.ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ "ಸಮಯ ಪರಿಪಾಲನೆ ಮತ್ತು ಅಧ್ಯಯನ ಕೌಶಲ” ಕುರಿತ ಕಾರ್ಯಾಗಾರದಲ್ಲಿ ಅವರು ತರಬೇತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಚಿಂತನಾ ರಾಜೇಶ್ ವಹಿಸಿಕೊಂಡಿದ್ದರು.
ಉಪ ಪ್ರಾಂಶುಪಾಲರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್. ಪ್ರಾಸ್ತಾವಿಕ ಮಾತನಾಡಿದರು. ಪ್ರೌಢಶಾಲಾ ಸಹಾಯಕ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಶೆಟ್ಚಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ರಂಜನಿ ನಿರೂಪಿಸಿದರು.
Kshetra Samachara
03/08/2022 07:22 pm