ಶಿರ್ವ: ಮಂಗಳೂರು ವಿ.ವಿಯ ಚಿನ್ನದ ಪದಕ ಪಡೆದು ಸಾಧನೆಗೈದ ಸಾಧಕಿ ಶಿರ್ವದ ಅಕ್ಷಿತಾ ಹೆಗ್ಡೆ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಕನ್ನಡಿ ಕೈ ಬರಹದ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೂ ಸೇರ್ಪಡೆಗೊಂಡಿದ್ದು, ರಾಷ್ಟ್ರೀಯ ಟಿವಿ ಪ್ರಸಾರಕ್ಕೆ ಆಯ್ಕೆಗೊಂಡಿದೆ.
ಅಕ್ಷಿತಾ ಅವರು ಬರೆದ ಮಂಕುತಿಮ್ಮನ ಕಗ್ಗದ 13 ಚರಣಗಳ ಕನ್ನಡಿ ಬರಹದ ವೀಡಿಯೋ ತುಣುಕುಗಳು ಮೇ. 15 ರಂದು ಬೆಳಿಗ್ಗೆ 11-30ಕ್ಕೆ ಸುದರ್ಶನ ಚಾನಲ್‌ನಲ್ಲಿ ಪ್ರಸಾರಗೊಳ್ಳಲಿದೆ. ಅಕ್ಷಿತಾ ಹೆಗ್ಡೆ ಉತ್ತಮ ಕನ್ನಡ ಕೈಬರಹವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಮಾರ್ಚ್ ತಿಂಗಳಲ್ಲಿ ಕಳುಹಿಸಿದ್ದರು. ಅವರಿಂದ ಕನ್ನಡಿ ಬರಹ ಬರೆದು ಕಳುಹಿಸಲು ಬಂದ ಸಲಹೆಯಂತೆ ಕೇವಲ 3-4 ದಿನಗಳಲ್ಲಿ ಕನ್ನಡಿ ಬರಹ ಕಲಿತು ಅದರ ವೀಡಿಯೋ ಮಾಡಿ ಎಪ್ರಿಲ್ ಮೊದಲ ವಾರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಿದ್ದು, ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿ, ರಾಷ್ಟ್ರೀಯ ಟಿವಿ ಪ್ರಸಾರಕ್ಕೆ ಆಯ್ಕೆ ಮಾಡಿದ್ದಾರೆ. ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನವರು ಎ. 10 ರಂದು ವೀಡಿಯೋ ದಾಖಲಿಸಿ ಅಕ್ಷಿತಾ ಹೆಗ್ಡೆ ಅವರ ಕನ್ನಡಿ ಬರಹವನ್ನು ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದ್ದರು.
ಶಿರ್ವದ ಜಯಲಕ್ಷ್ಮಿ ಹೆಗ್ಡೆಯವರ ಪುತ್ರಿಯಾಗಿರುವ ಅಕ್ಷಿತಾ ಹೆಗ್ಡೆ ,ನಿಟ್ಟೆಯ ಜ|ಕೆ.ಎಸ್ ಹೆಗ್ಡೆ ಇಸ್ಟಿಟ್ಯೂಟ್ ಆಫ್ ಮೆನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದು ಅದೇ ಸಂಸ್ಥೆಯಲ್ಲಿ ರಿಸರ್ಚ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Kshetra Samachara
14/05/2022 08:58 pm