ಉಡುಪಿ: ಮಕ್ಕಳನ್ನು ಮೊಬೈಲ್‌ನಿಂದ ಹೊರಗಿಡಿ. ಅತಿಯಾದ ಸ್ಪರ್ಧೆಗಳು ಕೂಡ ಒಳ್ಳೆಯದಲ್ಲ. ಬೇರೆ ಮಕ್ಕಳ ಜತೆಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡಬೇಡಿ ಎಂದು ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ 10 ದಿನಗಳ ಕಾಲ ಹಮ್ಮಿಕೊಂಡಿದ್ದ ‘ಬಾಲಲೀಲೆ’ ಮಕ್ಕಳ ರಂಗಶಿಬಿರದ ಸಮಾರೋಪದಲ್ಲಿ ಗುರುವಾರ ಅವರು ಮಾತನಾಡಿದರು.
ಕೊರೋನಾ ಕಾಲದಲ್ಲಿ ನಡೆದ ಆನ್‌ಲೈನ್ ತರಗತಿಗಳಿಂದಾಗಿ ಮಕ್ಕಳು ಮೊಬೈಲ್ ಮೇಲೆ ಹೆಚ್ಚು ಅವಲಂಬಿತರಾದರು. ಆಗ ತರಗತಿಯ ಜತೆಗೆ ಮೊಬೈಲ್ ಗೇಮ್‌ಗಳನ್ನು ಆಡಿದರು. ಆನ್‌ಲೈನ್ ತರಗತಿ ಮುಗಿದರೂ ಗೇಮ್‌ಗಳಿಂದಾಗಿ ಮಕ್ಕಳು ಇನ್ನೂ ಮೊಬೈಲ್ ಬಿಡುತ್ತಿಲ್ಲ. ಹೆತ್ತವರು ಮಕ್ಕಳನ್ನು ಮೊಬೈಲ್‌ನಿಂದ ಹೊರಗಿಡಿ ಎಂದು ಸಲಹೆ ನೀಡಿದರು.
ಹೆತ್ತವರಿಗೆ ತನ್ನ ಮಗುವನ್ನು ಬೇರೆಯವರ ಮಕ್ಕಳ ಜತೆಗೆ ಹೋಲಿಕೆ ಮಾಡುವ ಕಾಯಿಲೆ ಇದೆ. ಪಕ್ಕದ ಮನೆಯವರ ಮಗುವಿನ ತರಹ ಇರಬೇಕು. ಅಕ್ಕನ ಮಗನಂತೆ ಎಂಜಿನಿಯರ್ ಆಗಬೇಕು ಎಂದೆಲ್ಲ ನೋಡುತ್ತಾರೆ. ಇದು ಮಕ್ಕಳಲ್ಲಿ ಕೀಳರಿಮೆಯನ್ನು ಉಂಟು ಮಾಡುತ್ತದೆ. ಪ್ರತಿ ಮಗು ಕೂಡ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಉತ್ತಮ ಗುಣವನ್ನು ಹೊಂದಿರುತ್ತದೆ. ಅದನ್ನು ಗುರುತಿಸದೇ ಹೋಲಿಕೆ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಹೋಲಿಕೆ ಮಾಡುವುದನ್ನು ಹೆತ್ತವರು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಗೌರವಾಧ್ಯಕ್ಷ ಎಮ್.ಎಸ್.ಭಟ್, ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು, ರಂಗಶಿಬಿರದ ನಿರ್ದೇಶಕ ಗಣೇಶ್ ಸಗ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳೇ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಬಿರಾರ್ಥಿಗಳಿಂದ ವೆಂಕಟೇಶ ಪ್ರಸಾದ್ ರಚಿಸಿರುವ ಅರಣ್ಯಪರ್ವ ನಾಟಕ ಪ್ರದರ್ಶನಗೊಂಡಿತು.
Kshetra Samachara
13/05/2022 06:10 pm